ಕೊಪ್ಪಳ ಜೂನ್ ೧೯ : ಕೊಪ್ಪಳ ಜಿಲ್ಲೆಯ ಪ್ರಮುಖ ಸಾಹಿತಿಗಳಾದ ಡಾ. ಸಿದ್ದಯ್ಯ ಪುರಾಣಿಕ್ ರವರ ಜನ್ಮ ದಿನಾಚರಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಗುರುವಾರ (ಜೂ. ೧೮ರಂದು) ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.
ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಡಾ. ಸಿದ್ದಯ್ಯ ಪುರಾಣಿಕ್ ರವರ ಭಾವಚಿತ್ರಕ್ಕೆ ಪುಷ್ಪಾರ್ಪಿಸಿ ಗೌರವ ನಮನವನ್ನು ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಶರಣ ಸಾಹಿತ್ಯ, ವಚನ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಡಾ. ಸಿದ್ದಯ್ಯ ಪುರಾಣಿಕ್ ರವರು ಹೈದ್ರಬಾದ್ ಕರ್ನಾಟಕದಲ್ಲಿ ಬಿ.ಎಮ್ ಶ್ರೀ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ಕರೆಸಿ ಕನ್ನಡದ ಕಹಳೆಯನ್ನು ಮೊಳಗಿಸಿ, ಕನ್ನಡ ವಿಶ್ವಕೋಶ ಯೋಜನೆ, ಕನ್ನಡ ಸಾಹಿತ್ಯ ಪರಿಷತ್ ನಿಘಂಟು ಯೋಜನೆ, ಜೈಮಿನಿ ಭಾರತ, ಹರಶ್ಚಂದ್ರ ಕಾವ್ಯ ಪ್ರಕಟಣೆಯಲ್ಲಿ ಅಮೋಘವಾದ ಕಾರ್ಯವನ್ನು ನಿರ್ವಹಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಡಾ.ಸಿದ್ದಯ್ಯ ಪುರಾಣಿಕ್ ಟ್ರಸ್ಟ್ ಸ್ಥಾಪನೆಯಾಗಿದ್ದು, ೨೦೨೬-೨೭ನೇ ಸಾಲಿನಲ್ಲಿ ಪುರಾಣಿಕ್ ರವರ ಸಾಹಿತ್ಯ, ಸಂಶೋಧನೆ ಆಧರಿಸಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕರಾದ ಎಂ.ಎಸ್ ದೊಡ್ಡಮನಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ತಾಲೂಕು ಅಧಿಕಾರಿ ಯಮನೂರಪ್ಪ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.