Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒತ್ತುವರಿ ತೆರವು ಕಾರ್ಯಾಚರಣೆಯ ನೇತೃತ್ವ ಬದಲಿಸಬೇಡಿ: ಸಾಮಾಜಿಕ ಹೋರಾಟಗಾರ ಸಿದ್ದೇಶ ಊಳೂರು ಆಗ್ರಹ

ಬಳ್ಳಾರಿ: ನಗರದಲ್ಲಿ ಸರ್ಕಾರದ ಜಮೀನು, ನಿವೇಶನ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಾಗಿದ್ದ ಅಮೂಲ್ಯ ಆಸ್ತಿಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ಪರಿಣಾಮಕಾರಿಯಾಗಿ ನಡೆಯುತ್ತಿರುವ ಹಿನ್ನೆಲೆ, ಕಾರ್ಯಪಡೆ ಸಮಿತಿಯ ಅಧ್ಯಕ್ಷರಾಗಿರುವ ಅಪರ ಜಿಲ್ಲಾಧಿಕಾರಿಗಳನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಸಾಮಾಜಿಕ ಹೋರಾಟಗಾರ ಸಿದ್ದೇಶ ಊಳೂರು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಳ್ಳಾರಿ ನಗರದಲ್ಲಿ ಹಲವು ವರ್ಷಗಳಿಂದ ಸರ್ಕಾರಿ ಜಮೀನುಗಳು ಪ್ರಭಾವಿಗಳು, ರಾಜಕೀಯ ಬೆಂಬಲಿತ ವ್ಯಕ್ತಿಗಳು ಹಾಗೂ ಬೇನಾಮಿ ಹೆಸರಿನಲ್ಲಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡವರ ವಶದಲ್ಲಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿತ್ತು. ಇದರ ಪರಿಣಾಮವಾಗಿ ಸರ್ಕಾರದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಾದ ಭೂಮಿ ಲಭ್ಯವಾಗದೇ ಸಾರ್ವಜನಿಕ ಹಿತಾಸಕ್ತಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಸತಿ ಮತ್ತು ವಸತಿ ರಹಿತ ಶಾಲೆಗಳು, ಹಾಸ್ಟೆಲ್‌ಗಳು, ಸಮುದಾಯ ಭವನಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಚೇರಿಗಳು, ಸೂರುರಹಿತರಿಗೆ ವಸತಿ ಸಮುಚ್ಚಯಗಳು, ಮಿಲಿಟರಿ ಹಾಗೂ ಇತರೆ ಸಾರ್ವಜನಿಕ ಉದ್ದೇಶಗಳ ಯೋಜನೆಗಳಿಗೆ ಅಗತ್ಯವಾದ ಜಾಗ ಕೊರತೆಯಾಗುತ್ತಿದೆ. ಇದರಿಂದ ಸರ್ಕಾರ ಅಭಿವೃದ್ಧಿಗಾಗಿ ಮಂಜೂರು ಮಾಡಿದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಲಾಗದೆ, ಅನುದಾನವೇ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಅಭಿವೃದ್ಧಿಗೆ ಅಡ್ಡಿಯಾಗಿರುವ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, 06-06-2026ರಂದು ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಕಾರ್ಯಪಡೆ ಸಮಿತಿಯನ್ನು ರಚಿಸಿದ್ದರು. ಸಮಿತಿಯಲ್ಲಿ ಬುಡಾ ಆಯುಕ್ತರು, ಗ್ರಾಮೀಣ ಮತ್ತು ನಗರ ಡಿವೈಎಸ್‌ಪಿ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡು ಅಕ್ರಮ ಒತ್ತುವರಿ ಪತ್ತೆ ಮತ್ತು ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಸಮಿತಿಯು ಕಾರ್ಯಾರಂಭಿಸಿದ ನಂತರ ಯಾವುದೇ ರಾಜಕೀಯ ಅಥವಾ ಪ್ರಭಾವಿ ಒತ್ತಡಗಳಿಗೆ ಮಣಿಯದೇ ಕಾನೂನುಬದ್ಧ ಹಾಗೂ ದಕ್ಷ ಕಾರ್ಯಾಚರಣೆ ನಡೆಸುತ್ತಿದೆ. ನಗರ ಹೃದಯಭಾಗ ಸೇರಿದಂತೆ ವಿವಿಧ ವಾರ್ಡ್‌, ಕಾಲೋನಿ ಮತ್ತು ಪ್ರದೇಶಗಳಲ್ಲಿ ಸರ್ಕಾರದ ಹೆಸರಿನಲ್ಲಿದ್ದ ಭೂಮಿಯನ್ನು ಅಕ್ರಮವಾಗಿ ಬಳಸಿಕೊಂಡಿದ್ದ ಪ್ರಕರಣಗಳನ್ನು ಪತ್ತೆಹಚ್ಚಿ ತೆರವುಗೊಳಿಸುವಲ್ಲಿ ಸಮಿತಿ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
14-10-2026ರಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ಇದುವರೆಗೆ ಸುಮಾರು 88.76 ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ ಸುಮಾರು ₹383 ಕೋಟಿ ಎಂದು ಅಂದಾಜಿಸಲಾಗಿದೆ. ಇನ್ನೂ ನೂರಾರು ಎಕರೆ ಸರ್ಕಾರಿ ಭೂಮಿಯ ಮೇಲಿನ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ಬಾಕಿಯಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಬಳ್ಳಾರಿ ತಾಲ್ಲೂಕಿನ ಸರ್ವೆ ನಂ.13/1 ಸೇರಿದಂತೆ ಒಟ್ಟು 10.26 ಎಕರೆ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-167 ಭೂಸ್ವಾಧೀನ ಪ್ರಕರಣದಲ್ಲಿಯೂ ಸಮಿತಿಯ ಅಧ್ಯಕ್ಷರಾಗಿರುವ ಅಪರ ಜಿಲ್ಲಾಧಿಕಾರಿಗಳು ಮಹತ್ವದ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ. ಹಿಂದಿನ ಭೂಸ್ವಾಧೀನ ಅಧಿಕಾರಿಯು ₹113 ಕೋಟಿ ಪರಿಹಾರ ನಿಗದಿ ಮಾಡಿದ್ದ ಪ್ರಕರಣವನ್ನು ಮರುಪರಿಶೀಲನೆ ನಡೆಸಿ, ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗುವುದನ್ನು ತಪ್ಪಿಸಿ ಕೇವಲ ₹3.70 ಕೋಟಿ ಪಾವತಿಗೆ ಆದೇಶಿಸಿರುವುದು ಗಮನಾರ್ಹವಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಆಸ್ತಿಗಳ ಸಂರಕ್ಷಣೆ ಹಾಗೂ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಯಪಡೆ ಸಮಿತಿಯ ಅಧ್ಯಕ್ಷರನ್ನು ವರ್ಗಾವಣೆ ಮಾಡಿದರೆ ಕಾರ್ಯಾಚರಣೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಮಿತಿಯು ತನ್ನ ಕಾರ್ಯವನ್ನು ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವವರೆಗೆ ಅಪರ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*