ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ಆಚರಿಸಲಾಗುತ್ತಿರುವ ಈದ್ ಮಿಲಾದ್ ಹಬ್ಬಕ್ಕೆ ಡಿಜೆ ಹಚ್ಚಲು ಪರವಾನಿಗಿಯನ್ನೇ ನೀಡಿಲ್ಲ. ಯಾರೂ ಕೂಡ ಡಿಜೆ ಹಚ್ಚುತ್ತೇವೆ ಎಂದು ಮನವಿ ಸಲ್ಲಿಸದ ಹಿನ್ನೆಲೆ ಯಾರಿಗೂ ನಾವು ಅನುಮತಿ ಕೊಟ್ಟಿಲ್ಲ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ನಾವು ಹೆಚ್ಚಿನ ಬಂದೋಬಸ್ತ್ ಒದಗಿಸುತ್ತಿದ್ದೇವೆ. ಹೆಚ್ಚುವರಿ ಪೊಲೀಸರು, ಹೋಮ್ ಗಾರ್ಡ್‌ಗಳು ಹಾಗೂ ಸ್ವಯಂ ಸೇವಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಡ್ರೋಣ್ ಕ್ಯಾಮೆರಾಗಳನ್ನೂ ನಾವು ಬಳಕೆ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ರೂಟ್ ಮಾರ್ಚ್ ಸಹ ಮಾಡಿದ್ದೇವೆ ಎಂದರು.
ಈದ್ ಮಿಲಾದ್ ಹಬ್ಬಕ್ಕೆ ಡಿಜೆ ಹಚ್ಚುತ್ತೇವೆ ಎಂದು ಯಾರೂ ನಮಗೆ ಮನವಿ ಮಾಡಿಲ್ಲ. ಹುಬ್ಬಳ್ಳಿ, ಧಾರವಾಡ ಎರಡೂ ಅಂಜುಮನ್ ಕಮಿಟಿಯವರು, ಇದು ಪ್ರವಾದಿ ಮೊಹ್ಮದ್ ಪೈಂಗಬರರ ಜನ್ಮ ದಿನಾಚರಣೆ ಆಗಿರುವುದರಿಂದ ಡಿಜೆ ಹಚ್ಚದೇ ಧಾರ್ಮಿಕ ರೀತಿಯಲ್ಲಿ ಹಬ್ಬ ಆಚರಿಸುತ್ತೇವೆ. ಡಿಜೆ ಹಚ್ಚುವುದಿಲ್ಲ ಎಂದು ಮನವಿ ಕೊಟ್ಟ ಹಿನ್ನೆಲೆ ಅದರ ಆಧಾರದ ಮೇಲೆ ಯಾರಿಗೂ ನಾವು ಡಿಜೆ ಹಚ್ಚಲು ಅನುಮತಿ ಕೊಟ್ಟಿಲ್ಲ. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ನಾವು ಡಿಜೆ ಹಚ್ಚಲು ಅನುಮತಿ ಪಡೆದಿದ್ದೇವೆ ಎಂದೆಲ್ಲ ಹೇಳಿಕೆ ಬಿಟ್ಟಿದ್ದಾರೆ. ಅದು ತಪ್ಪು ಸಂದೇಶ. ಯಾರಿಗೂ ನಾವು ಡಿಜೆ ಹಚ್ಚಲು ಪರವಾನಿಗಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.