ಬೆಳಗಾವಿ, ಜುಲೈ ೧೬: ಐಸಿಎಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಮತ್ತಿಕೊಪ್ಪ, ಬೆಳಗಾವಿ ವತಿಯಿಂದ ಐಸಿಎಆರ್ ಸಿಎಸ್‌ಆರ್ ಸಮಾವೇಶ ೨೦೨೬ರ ಅಂಗವಾಗಿ ಜುಲೈ ೧೫ರಂದು ಕಿಸಾನ್ ಸಾರಥಿ ಮೊಬೈಲ್ ಆಪ್ ಮೂಲಕ ಆಯೋಜಿಸಲಾದ ರಾಷ್ಟ್ರವ್ಯಾಪಿ ರೈತರ ತ್ವರಿತ ಆನ್‌ಲೈನ್ ಪ್ರತಿಕ್ರಿಯೆ ಸಮೀಕ್ಷೆಯಲ್ಲಿ ೧,೬೦೦ಕ್ಕೂ ಹೆಚ್ಚು ರೈತರನ್ನು ನೋಂದಾಯಿಸಿ ದೇಶದಲ್ಲಿಯೇ ಅತಿ ಹೆಚ್ಚು ರೈತರ ಭಾಗವಹಿಸುವಿಕೆ ದಾಖಲಿಸಿದ ಕೃಷಿ ವಿಜ್ಞಾನ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ರೈತರಿಗೆ ಕಿಸಾನ್ ಸಾರಥಿ ಆಪ್ ಡೌನ್‌ಲೋಡ್, ನೋಂದಣಿ ಹಾಗೂ ಸಮೀಕ್ಷೆಯಲ್ಲಿ ಭಾಗವಹಿಸಲು ಮಾರ್ಗದರ್ಶನ ನೀಡುವ ಮೂಲಕ ಈ ಸಾಧನೆ ಸಾಧ್ಯವಾಯಿತು.
ಈ ರಾಷ್ಟ್ರಮಟ್ಟದ ಸಾಧನೆಗಾಗಿ ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಪ್ರಭಾಕರ ಕೋರೆ, ಅಧ್ಯಕ್ಷರಾದ ಶ್ರೀ ಅಮಿತ್ ಪಿ. ಕೋರೆ, ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷರಾದ ಶ್ರೀ ಬಿ.ಆರ್. ಪಾಟೀಲ ಹಾಗೂ ಐಸಿಎಆರ್ ಅಟಾರಿ, ಬೆಂಗಳೂರಿನ ನಿರ್ದೇಶಕರಾದ ಡಾ. ಪ್ರಭಾಕರ ಮತ್ಯಮ್ ಅವರು ಕೇಂದ್ರದ ವಿಜ್ಞಾನಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ಅವರು ರೈತರಿಗೆ ಕಿಸಾನ್ ಸಾರಥಿ ಆಪ್ನ ಉಪಯೋಗ, ನೋಂದಣಿ ಹಾಗೂ ಸ್ಥಳೀಯ ಭಾಷೆಯಲ್ಲಿ ಲಭ್ಯವಿರುವ ವೈಜ್ಞಾನಿಕ ಕೃಷಿ ಸಲಹೆಗಳ ಕುರಿತು ಮಾಹಿತಿ ನೀಡಿ, ಪ್ರಾಯೋಗಿಕ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಡಾ. ಎಸ್.ಎಸ್. ಹಿರೇಮಠ, ಎಸ್.ಎಂ. ವಾರದ, ಜಿ.ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಡಾ. ಭಾವಿನಿ ಪಾಟೀಲ, ಡಾ. ಗುರುರಾಜ ಕೌಜಲಗಿ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಶಂಕರಗೌಡ ಪಾಟೀಲ, ವಿನೋದ ಕೋಚಿ ಮತ್ತು ಮಂಜುನಾಥ ಪಿ.ಐ. ಅವರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.