ರಾಮದುರ್ಗ: ತಾಲೂಕಿನ ರೈತರ ಅನುಕೂಲಕ್ಕಾಗಿ ಸಾವಿರಾರು ಕೋಟಿ ಅನುದಾನದಲ್ಲಿ ವೀರಭಧ್ರೇಶ್ವರ ಹಾಗೂ ಸಾಲಾಪೂರ ಬಸವೇಶ್ವರ ಸೇರಿದಂತೆ ಎರಡು ಬೃಹತ್ ಏತ ನೀರಾವರಿ ಯೋಜನೆಗಳನ್ನು ತಂದು ಕಾಮಗಾರಿಗೆ ಪ್ರಾರಂಭಿಸಲಾಯಿತು. ಆದರೇ ಕೆಲ ತಾಂತ್ರಿಕ ಕಾರಣಗಳಿಂದ ವೀರಭದ್ರೇಶ್ವರ ಏತ ನೀರವಾರಿ ವಿಳಂಭವಾಗಿದ್ದು, ಕಾನೂನು ತೋಡಕುಗಳನ್ನು ಸರಿಪಡಿಸಿಕೊಂಡು ಪುನಹ ಸದ್ಯದಲ್ಲಿಯೇ ಹೊಸ ಟೆಂಡರ್ ಕರೆದು ಈ ವರ್ಷದ ಅವಧಿಯಲ್ಲಿಯೇ ಕಾಮಗಾರಿ ಮುಗಿಸಿ ನೀರು ಹರಿಸಲಾಗುವದು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ಹೊರವಲಯದ ತಮ್ಮ ಗೃಹ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೭ ರಲ್ಲಿಯೇ ವೀರಭಧ್ರೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವ ಮೂಲಕ ತಾಲೂಕಿನ ೩೦ ಗ್ರಾಮ ಹಾಗೂ ಮುಧೋಳ ತಾಲೂಕಿನ ೪ ಗ್ರಾಮ ಸೇರಿ ಒಟ್ಟು ೧೭,೩೭೭ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ೫೪೪ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು.
ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿ ೯ ವರ್ಷ ಗತಿಸಿದೆ. ಈಗ ಹೊಸ ಕ್ರೀಯಾ ಯೋಜನೆಯಂತೆ ಕಾಮಗಾರಿಗೆ ಸುಮಾರು ರೂ. ೭೦೦ ಕೋಟಿಗೂ ಅಧಿಕ ವೆಚ್ಚ ತಗುಲುವ ನಿರೀಕ್ಷೆಯಿದೆ. ಮುಂದಿನ ತಿಂಗಳು ಹೊಸ ಟೆಂಡರ್ ಕರೆದು, ಕಾಮಗಾರಿ ಆರಂಭಿಸಲಾಗುವುದು ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಯೋಜನೆಗೆ ಸಂಬಂಧಿಸಿದಂತೆ ಭೂ ಸ್ವಾದೀನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಳಿಸಲಾಗಿದೆ. ರೈತರ ಏಳ್ಗೆಗೆ ರಾಜ್ಯ ಸರಕಾರ ಬದ್ಧವಿದ್ದು, ಒಂದು ವೇಳೆ ಭೂಸ್ವಾಧೀನದಲ್ಲಿ ರೈತರಿಗೆ ಪರಿಹಾರ ದೊರೆಯದೇ ಹೋದಲ್ಲಿ ಅಂತಹ ಪ್ರಕರಣಗಳಿಗೆ ಪರಿಹಾರ ಕೊಡಿಸಲು ತಾವು ಹಾಗೂ ಅಧಿಕಾರಿಗಳು ಶ್ರಮಿಸಲಿದ್ದಾರೆ ಎಂದು ಭರವಸೆ ನೀಡಿದರು.
ಬಸವೇಶ್ವರ ಏತ ನೀರವಾರಿ:
ವೀರಭಧ್ರೇಶ್ವರ ಎರಡು ವರ್ಷಗಳ ನಂತರ ಆರಂಭಿಸಿದ ಸಾಲಾಪೂರ ಬಸವೇಶ್ವರ ಏತ ನೀರಾವರಿ ಕಾಮಗಾರಿ ಭರದಿಂದ ಸಾಗಿದ್ದು, ಇದರಿಂದ ತಾಲೂಕಿನ ೧೪, ಮುಧೋಳ ತಾಲೂಕಿನ ೨, ಬದಾಮಿ ತಾಲೂಕಿನ ೬ ಗ್ರಾಮಗಳು ಸೇರಿದಂತೆ ಒಟ್ಟು ೨೨ ಗ್ರಾಮಗಳ ಸುಮಾರು ೧೩೦೦೦ ಹೆಕ್ಟರ್ ಭೂ ಪ್ರದೇಶ ರೈತರ ಜಮೀನು ನೀರಾವರಿ ಸೌಲಭ್ಯಕ್ಕೆ ಒಳಗಾಗಲಿದೆ. ಈ ಯೋಜನೆಗೆ ರೂ. ೫೬೬ ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಅಗತ್ಯ ಅನುದಾನ ಬಿಡುಗಡೆಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇನೆ. ಪ್ರಸಕ್ತ ಸಾಲಿನ ಡಿಸೆಂಬರನಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ, ರೈತರ ಜಮೀನುಗಳಿಗೆ ನೀರು ಹರಿಸಲಾಗುವದು. ಕೇವಲ ೧೦ ಪ್ರತಿಶತ ವಿದ್ಯುತ್ ಕೆಲಸ ಬಾಕಿ ಇದ್ದು, ಆದಷ್ಟು ಬೇಗ ನೀರು ಹರಿಸಲಾಗುವದು ಎಂದು ತಿಳಿಸಿದರು.
ವೀರಭದ್ರೇಶ್ವರ ಹಾಗೂ ಸಾಲಾಪೂರ ಬಸವೇಶ್ವರ ಏತ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸುವ ಕುರಿತು ಕೇಳಿ ಬಂದಿದ್ದು, ರೈತರು ತಮ್ಮ ಬೇಡಿಕೆಗಾಗಿ ಪ್ರತಿಭಟನೆ ಮಾಡಲು ನಮ್ಮ ತಕರಾರು ಇಲ್ಲ. ಆದರೇ ಯೋಜನೆಯ ವಸ್ತುಸ್ಥಿತಿಯ ಕುರಿತು ರೈತರ ಗಮನಕ್ಕೆ ತರುತ್ತಿದ್ದು, ತಾವು ಹಾಗೂ ಸರಕಾರ ಸುಮ್ಮನೇ ಕುಳಿತ್ತಿಲ್ಲ. ಯೋಜನೆ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುವಂತೆ ಮಾಡಲು ಸರಕಾರದ ಪರವಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.
ಕೆರೆ ತುಂಬಿಸುವ ಯೋಜನೆ:
ತಾಲೂಕಿನ ಕೆ.ಚಂದರಗಿ ಸುತ್ತಮುತ್ತಲಿನ ಸುಮಾರು ೯ ಕೆರೆಗಳನ್ನು ತುಂಬಿಸುವ ರೂ.೧೦೦ ಕೋಟಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋಧನೆ ದೊರೆತು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರ ಕಾಮಗಾರಿ ಪ್ರಾರಂಭಿಸಿ, ಆ ಭಾಗದ ರೈತರ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಭವನೆಯನ್ನು ತೀರಿಸಲು ಕ್ರಮ ವಹಿಸಲಾಗುವದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಲಪ್ರಭಾ ಎಡದಂಡೆ ಕಾಲುವೆ ರಾಮದುರ್ಗ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಗಿರೀಶ ಮೇಟಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀನಿವಾಸ ಅರಿಶಿಣಗೋಡಿ, ಟಿ.ಎನ್. ರುದ್ರಮುನಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಮುಖಂಡರಾದ ಶಿದ್ಲಿಂಗಪ್ಪ ಶಿಂಗಾರಗೊಪ್ಪ, ಬಸವರಾಜ ಪ್ಯಾಟಿಗೌಡ್ರ, ಸುರೇಶ ಫತ್ತೇಪೂರ, ಜಹೂರ ಹಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.