ಬಳ್ಳಾರಿ.ನ 23:: ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ,ಮಾನವತೆಯ ಸಂದೇಶ ಸಾರಿದ ದಾರ್ಶನಿಕ,ಜಗಜ್ಯೋತಿ ಬಸವಣ್ಣನವರು ಮತ್ತು ಶರಣರ ವಿಚಾರಧಾರೆ ಇಡೀ ಮನುಕುಲಕ್ಕೆ ಮಾದರಿಯಾಗಿದೆ.
ಬಸವಣ್ಣನವರ ಕಾಯಕ,ದಾಸೋಹ,ಸಮಾನತೆಯ ಜಾತ್ಯಾತೀತ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ.
ಆದರೆ ಇತ್ತೀಚೆಗೆ ಬಸವಣ್ಣನವರ ತತ್ವಾದರ್ಶಗಳ ಕುರಿತು ಅಪಪ್ರಚಾರ, ಅವಹೇಳನಕಾರಿ ಮಾತುಗಳನ್ನಾಡಿ, ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿರುವದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.ಲೇಖಕ ರವಿ ಹಂಜ್ ಅವರು ತಮ್ಮ ಸಂದರ್ಶನದಲ್ಲಿ ತಮಗೆ ತೋಚಿದಂತೆ ವಚನಗಳನ್ನು ತಿರುಚಿ ಹೇಳುವ ಮೂಲಕ ಉದ್ದಟತನ ತೋರಿದ್ದಾರೆ.ಅರ್ಥವಿಲ್ಲದೆ ಸಮಾಜವನ್ನು ತಪ್ಪು ದಾರಿಗೆಳೆಯುವ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ. ಶರಣರ ಇತಿಹಾಸ,ತತ್ವಾದರ್ಶಗಳನ್ನು ಕುರಿತು ಆರೋಗ್ಯಕರವಾಗಿ ಚರ್ಚಿಸಬಹುದೇ ಹೊರತು ಉದ್ದೇಶಪೂರ್ವಕವಾಗಿ ವಿಕೃತಗೊಳಿಸಿ ಹೇಳುವದು ಸಮಾಜದಲ್ಲಿ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗುವದು ಇಂತಹ ಕೃತ್ಯಗಳನ್ನು ಯಾವ ಕಾರಣಕ್ಕೂ ಸಹಿಸಲಾಗದು ಇದನ್ನು ತೀವ್ರವಾಗಿ ಖಂಡಿಸುತ್ತೇವೆಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದ್ದಾರೆ.
ಬಸವಣ್ಣನವರು ರಚಿಸಿರುವ ವಚನಗಳು ಸರ್ವರಿಗೂ ದಾರಿ ದೀಪವಾಗಿವೆ. ಅವರ ವಚನಗಳು ಮಾನವೀಯ ಮೌಲ್ಯಗಳನ್ನು ಸಾರುತ್ತಿದ್ದು ಬಸವಾದಿ ಶರಣರ ಬಗ್ಗೆ ಅವಹೇಳನ ಮಾಡುವುದು ಅವರ ಪೂರ್ವಾಗ್ರಹ ಪೀಡಿತ ಮನಸ್ಥಿತಿ ತೋರಿಸುತ್ತದೆ . ವೈಚಾರಿಕ ಬಿನ್ನಾಭಿಪ್ರಾಯ ವಿಮರ್ಶೆ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ, ಆದರೆ ಬಸವಣ್ಣನವರಂತಹ ಸಮಾಜ ಸುಧಾರಕರ ಬಗ್ಗೆ ಅರ್ಥರಹಿತವಾಗಿ ಮಾತನಾಡುವುದು,ಮನಸೋ ಇಚ್ಛೆ ಬರೆಯುವುದು ಜನರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವಂತದ್ದಾಗಿದೆ.
ಶರಣ ಸಂಸ್ಕೃತಿಯ ಮೌಲ್ಯಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.ಸರ್ಕಾರ ಅವರು ಬರೆದ ಪುಸ್ತಕ ಮುಟ್ಟುಗೋಲು ಹಾಕುವದಕ್ಕೆ ಸೀಮಿತವಾಗದೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಾನೂನುಬದ್ಧ ,ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ.