ಇಂಡಿ : ಮಳೆಯ ಕೊರತೆ ಮತ್ತು ಅಸ್ಥಿರ ಹವಾಮಾನ ಪರಿಣಾಮ ತೋಟಗಾರಿಕೆ ಬೆಳೆಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ತೆಂಗು, ಮಾವು, ತರಕಾರಿ ಉಳ್ಳಾಗಡ್ಡೆ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳ ತುರ್ತು ನಿರ್ವಹಣಾ ಕ್ರಮ ಅನುಸರಿಸಿದರೆ ಬರದ ಪರಿಣಾಮವನ್ನು ತಗ್ಗಿಸಿ ಉತ್ತಮ ಬೆಳವಣೆಗೆ ಹಾಗೂ ಇಳುವರಿಯನ್ನು ಕಾಯ್ದು ಕೊಳ್ಳಬಹುದು ಎಂದು ಡಾ. ಹೀನಾ ಹೇಳಿದರು.
ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ ಬರ ಮಳೆಯ ಕೊರತೆ ನಿಮಿತ್ಯ ತೋಟಗಾರಿಗೆ ಬೆಳೆಗಳ ಸಂರಕ್ಷಣೆ ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ತೋಟಗಳಲ್ಲಿ ಮಣ್ಣಿನ ತೇವಾಂಶ ಸಂರಕ್ಷಣೆ ಹನಿ ನೀರಾವರಿ ಸಮತೋಲನ, ಗೊಬ್ಬರ ನಿರ್ವಹಣೆ ಹಾಗೂ ಸಮಗ್ರ ಕೀಟ ರೋಗ ನಿಯಂತ್ರಣಕ್ಕೆ ಆಧ್ಯತೆ ನೀಡುವದು ಅತ್ಯಗತ್ಯವಾಗಿದೆ. ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸುವುದರ ಜತೆಗೆ ಮಲ್ಚಿಂಗ ಅಂತರಬೆಳೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಪೂರೈಕೆ ಮಾಡುವದರಿಂದ ಬರ ಎದುರಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತದೆ ಎಂದರು.
ವಿಜ್ಞಾನಿ ಡಾ. ಪ್ರಸಾದ ಮಾತನಾಡಿ ತೆಂಗಿನ ಗಿಡದ ಒಣಗಿದ ಗರಿಗಳನ್ನು ತೆಗೆದು ಹಾಕಬೇಕು, ಕಬ್ಬಿನ ರವದಿ ಗಿಡದ ಬಡ್ಡೆಯಲ್ಲಿ ಹೊದಿಕೆ ಮಾಡುವದರಿಂದ ನೀರಿನ ಸಂರಕ್ಷಣೆ ಮಾಡಬಹುದು, ಹಣ್ಣಿನ ಬೆಳೆಗಳಿಗೆ ಶೇ ೫ ಕಯೋಲಿನ ದ್ರಾವಣವನ್ನು ಎಲೆಗಳ ಮೇಲೆ ಸಿಂಪಡಿಸಬೇಕು,ತರಕಾರಿ ಬೆಳೆಗಳಿಗೆ ಪೋಟ್ಯಾಸಿಯಂ ನೈಟ್ರೇಟ್ ಸಿಂಪಡಿಸಬೇಕು ಎಂದರು.
ವಿಜ್ಞಾನಿ ಡಾ. ಪ್ರಕಾಶ ಮಾತನಾಡಿ ಉಳ್ಳಾಗಡ್ಡೆಗೆ ಗಡ್ಡೆ ಪ್ರಾರಂಭ ಹಂತದಲ್ಲಿ ನೀರಿಗೆ ಆಧ್ಯತೆ ನೀಡಿ, ಬೇರೆ ಸಮಯದಲ್ಲಿ ಅವಶ್ಯಕತೆ ಇಲ್ಲ, ಡಾಳಿಂಬೆ ಮತ್ತು ಮೆಣಸಿನಕಾಯಿಗೆ ೧೦೦ ರಿಂದ ೧೫೦ ಪಿಪಿಎಂ ಸಲಿಶ್ಯಾಲಿಕ ಆಸಿಡ್ ದ್ರಾವಣ ಸಿಂಪಡಿಸಬೇಕು. ನಿಂಬೆ ಗಿಡಗಳಿದ್ದರೆ ೫ ವರ್ಷಕ್ಕಿಂತ ದೊಡ್ಡ ಗಿಡದ ಕಾಂಡಗಳಿಗೆ ಸುಣ್ಣ ಲೇಪನ ಮಾಡಬೇಕು.ಬೊಡೋಪೆಸ್ಟ ಒಂದು ಕೆಜಿ ಸುಣ್ಣ ಒಂದು ಕೆಜಿ ಕಾಪರ್ ಸಲ್ಪೇಟ್ ದಿಂದ ಅಂಟುರೋಗನಿಯಂತ್ರಿಸಬಹುದು ಎಂದರು.
ಡಾ. ಪ್ರೇಮಚಂದ್ರ , ಡಾ. ಸುನೀಲ, ಜಕ್ಕಣ್ಣ ಬಿರಾದಾರ ವೇದಿಕೆಯ ಮೇಲಿದ್ದರು.
ಡಾ. ವೀಣಾ ಚಂದಾವರಿ ಸ್ವಾಗತಿಸಿದರು. ಮಂಜುಳಾ ನಿರೂಪಿಸಿದರು.