ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಎತ್ತಿನಕೇರಿ-ಮಲ್ಲಾಪುರ ಬಸವ ಮಂಟಪದಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಈ ಸುಸಂದರ್ಭದಲ್ಲಿ ಗ್ರಾಮದ ಶರಣೆಯರು ಬಸವಣ್ಣನವರ ಭಾವಚಿತ್ರವನ್ನು ಶ್ರದ್ಧಾಭಕ್ತಿಗಳಿಂದ ತೊಟ್ಟಿಲಿನಲ್ಲಿಟ್ಟು, ಜೋಗುಳ ಹಾಗೂ ಬಸವಣ್ಣನವರ ವಚನಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸಂಪ್ರದಾಯಬದ್ಧವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯುದ್ದಕ್ಕೂ ವಚನಗಳನ್ನು ಪಠಿಸುವ ಮೂಲಕ ಜನರಲ್ಲಿ ಸಾಮಾಜಿಕ ಸಮಾನತೆ ಹಾಗೂ ಕಾಯಕ ತತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಬಸವ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೆ, ಬಸವಣ್ಣನವರ ವಿಚಾರಧಾರೆಗಳು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಕೆಯಾಗಬೇಕು ಎನ್ನುವ ಸಂದೇಶ ಈ ವೇಳೆ ಮೊಳಗಿತು.
ಕಾರ್ಯಕ್ರಮದ ಸಮಾರೋಪದಲ್ಲಿ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲಿನ ಹಳ್ಳಿಯ ನೂರಾರು ಸದ್ಭಕ್ತರು ಈ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ ಶರಣರಾದ ರಾಯಪ್ಪ ಹಣಜಿ, ಅಶೋಕ ಅಳ್ನಾವರ, ಮಹೇಶ ಪೂಜೇರ, ಜಗದೀಶ ಕಂಬಾರಗಣವಿ, ಅಶೋಕ ಕೂಗಟಿ, ಬಾಳಪ್ಪ ಶಿವಲಿಂಗನವರ, ಕೇಶಪ್ಪ ಶಿವಲಿಂಗನವರ, ಬಸವರಾಜ ಅಮಟೂರ ಸೇರಿದಂತೆ ಶರಣ ತಂದೆ ತಾಯಂದಿರು ಇದ್ದರು.
