ಕುಡಿತಿನಿ, ಜೂ. 06: ವಿವಿಧ ರೈತ, ಕಾರ್ಮಿಕ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಜಂಟಿ ಸಮಿತಿಯ ವತಿಯಿಂದ ಜೂನ್ 18ರಂದು ಕರೆ ನೀಡಲಾಗಿರುವ ಬಳ್ಳಾರಿ ಜಿಲ್ಲಾ ಬಂದ್‌ನ್ನು ಯಶಸ್ವಿಗೊಳಿಸಲು ಸಾರ್ವಜನಿಕರ ಬೆಂಬಲ ಕೋರಲಾಯಿತು.
ಭೂ ಸಂತಸ್ತ್ರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ್ಯ ರೈತ ಸಂಘಟನೆ (ಕೆಪಿಆರ್‌ಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಕನ್ನಡ ಪರ ಸಂಘಟನೆಗಳು, ಡಿವೈಎಫ್‌ಐ, ಎಐಟಿಯುಸಿ, ಎಸ್‌ಎಫ್‌ಐ, ರಾಜ್ಯ ರೈತ ಸಂಘ, ಹೆಸರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ಕುಡಿತಿನಿಯಲ್ಲಿ ಬೈಕ್ ರ್ಯಾಲಿ ನಡೆಸಿ ಜಾಗೃತಿ ಮೂಡಿಸಿದರು.
ಕುಡಿತಿನಿ ಹಾಗೂ ಸುತ್ತಮುತ್ತಲಿನ ಏಳು ಗ್ರಾಮಗಳ ರೈತರು, ಕಾರ್ಮಿಕರು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದರು. ರ್ಯಾಲಿಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಬಂದ್‌ನ ಉದ್ದೇಶ ಮತ್ತು ಹೋರಾಟದ ಹಿನ್ನೆಲೆಯನ್ನು ವಿವರಿಸಿತು.
ನಂತರ ಪಟ್ಟಣದ ರಾಯಲ್ ವೃತ್ತದಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಜನಪರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಂಕೇತವಾಗಿ ಭೂತದಹನ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಜೆ. ಸತ್ಯಬಾಬು, ರೈತರು, ಕಾರ್ಮಿಕರು, ಭೂಹೀನರು ಹಾಗೂ ದುಡಿಯುವ ವರ್ಗದ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂಬುದು ಬಂದ್‌ನ ಪ್ರಮುಖ ಉದ್ದೇಶವಾಗಿದೆ. ಜನರ ಹಿತಾಸಕ್ತಿಗೆ ಸಂಬಂಧಿಸಿದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಜೂನ್ 18ರ ಬಳ್ಳಾರಿ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೇಳಿದರು.
ಸಿಐಟಿಯು ಮುಖಂಡ ಎಂ. ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲೆಯ ಜನರು, ವ್ಯಾಪಾರಸ್ಥರು, ರೈತರು, ಕಾರ್ಮಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಬಂದ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕುಡಿತಿನಿ, ಹರಗಿನಡೋಣಿ, ಜಾಣೆಕುಂಟೆ, ವೇಣಿ, ವೀರಪುರಂ ಸೇರಿದಂತೆ ವಿವಿಧ ಗ್ರಾಮಗಳ ರೈತ ಮುಖಂಡರು, ದೇವದಾಸಿ ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಜೂನ್ 18ರಂದು ನಡೆಯಲಿರುವ ಬಳ್ಳಾರಿ ಜಿಲ್ಲಾ ಬಂದ್‌ನ್ನು ಯಶಸ್ವಿಗೊಳಿಸಲು ಎಲ್ಲ ವರ್ಗದ ಜನರು ಸಹಕರಿಸಬೇಕು ಎಂದು ಜಂಟಿ ಸಮಿತಿಯ ಮುಖಂಡರು ಮನವಿ ಮಾಡಿದರು.