ಮಹಾಲಿಂಗಪುರ ಜೂ. ೨೩: ಗ್ರಾಮೀಣ ಜೀವನ, ಕೃಷಿ ಪರಂಪರೆ ಹಾಗೂ ರೈತ-ಎತ್ತುಗಳ ನಡುವಿನ ಅವಿನಾಭಾವ ಸಂಬಂಧವನ್ನು ಅನಾವರಣಗೊಳಿಸುವ ತೆರೆಬಂಡಿ ಉತ್ಸವವು ಮಹಾಲಿಂಗಪುರ ನಗರದಲ್ಲಿ ವಿಜೃಂಭಣೆಯಿಂದ ನಡೆಯಿತು.ಬಸವೇಶ್ವರ ಜಾತ್ರಾ ಸಮಿತಿಯ ಆಶ್ರಯದಲ್ಲಿ ಆಯೋಜಿಸಿದ್ದ ಈ ಉತ್ಸವದಲ್ಲಿ ನೂರಾರು ರೈತರು, ಗ್ರಾಮಸ್ಥರು ಹಾಗೂ ಗಣ್ಯರು ಭಾಗವಹಿಸಿ ಸಂಭ್ರಮಿಸಿದರು.
ಕಾರ್ಯಕ್ರಮಕ್ಕೆ ರಬಕವಿ-ಬನಹಟ್ಟಿ ಸಿಪಿಐ ಆರ್.ಆರ್. ಪಾಟೀಲ ಅವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಬಸವೇಶ್ವರ ಜಾತ್ರಾ ಸಮಿತಿಯ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೇಶ ಸಾಂಗಲಿಕರ, "ನಮ್ಮ ಪೂರ್ವಜರು ನಮಗೆ ನೀಡಿರುವ ಕೃಷಿ ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಯಂತ್ರಗಳ ಬಳಕೆ ಹೆಚ್ಚಾದರೂ ರೈತರು ಮತ್ತು ಎತ್ತುಗಳ ನಡುವಿನ ಬಾಂಧವ್ಯ ಎಂದಿಗೂ ಕಡಿಮೆಯಾಗುವುದಿಲ್ಲ. ಎತ್ತುಗಳ ಸಾಮರ್ಥ್ಯ ಗುರುತಿಸುವ ಹಾಗೂ ರೈತರ ಪರಿಶ್ರಮಕ್ಕೆ ಗೌರವ ಸಲ್ಲಿಸುವ ವೇದಿಕೆಯಾಗಿ ತೆರೆಬಂಡಿ ಉತ್ಸವಗಳು ಕಾರ್ಯನಿರ್ವಹಿಸುತ್ತಿವೆ" ಎಂದು ಹೇಳಿದರು.
ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಜೋಡೆತ್ತುಗಳ ಸ್ಪರ್ಧೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಉತ್ಸಾಹದಿಂದ ಭಾಗವಹಿಸಿದ್ದರು. ಅಲಂಕೃತ ಜೋಡೆತ್ತುಗಳು, ಅವುಗಳ ಸಾಮರ್ಥ್ಯ ಮತ್ತು ಚುರುಕುತನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ರೈತರು ಸಂತಸ ವ್ಯಕ್ತಪಡಿಸಿದರೆ, ಸೋತ ಸ್ಪರ್ಧಿಗಳು ಕೂಡ ಕ್ರೀಡಾ ಮನೋಭಾವ ಪ್ರದರ್ಶಿಸಿ ಮುಂದಿನ ಬಾರಿ ಉತ್ತಮ ಸಾಧನೆ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು.
ರೈತರು ತಮ್ಮ ಎತ್ತುಗಳನ್ನು ಕುಟುಂಬದ ಸದಸ್ಯರಂತೆ ಸಾಕಿ ಸಲಹುವುದರಿಂದ, ಬಹುಮಾನ ಗಳಿಸಿದ ಸಂದರ್ಭದಲ್ಲಿ ಅವರ ಮುಖದಲ್ಲಿ ಕಂಡುಬಂದ ಹೆಮ್ಮೆ ಮತ್ತು ಸಂತೋಷ ಎಲ್ಲರ ಗಮನ ಸೆಳೆಯಿತು. ಗ್ರಾಮೀಣ ಜೀವನದ ಸೊಗಡನ್ನು ಪ್ರತಿಬಿಂಬಿಸಿದ ಈ ಉತ್ಸವ ಯುವ ಪೀಳಿಗೆಗೆ ಕೃಷಿ ಸಂಸ್ಕೃತಿಯ ಮಹತ್ವವನ್ನು ಪರಿಚಯಿಸುವ ವೇದಿಕೆಯಾಗಿತ್ತು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ಮಾಪಕ ಶ್ರೀಶೈಲ ಭಜಂತ್ರಿ, ನಿಂಗಪ್ಪ ಬಾಳಕಾಯಿ, ಅಶೋಕ ಅಂಗಡಿ, ಮಹಾದೇವ ಮೇಟಿ, ಯಲ್ಲಪ್ಪ ಹಟ್ಟಿ, ವಿಜಯಗೌಡ ಪಾಟೀಲ, ಸದಾಶಿವ ಗೋಬರದ, ಮಹೇಶ ಹುಬ್ಬಳ್ಳಿ, ಲಕ್ಷ್ಮಣ ಚಮಕೇರಿ, ಭೀಮಶಿ ಸನಾಲಟ್ಟಿ, ಬಸವರಾಜ ಬಂಡಿವಡ್ಡರ, ವಿಠಲ ಧವಳೇಶ್ವರ, ಅರ್ಜುನ ದೊಡ್ಡಮನಿ, ದೇವರೇಶ ಉಳ್ಳಾಗಡ್ಡಿ, ವಿಠಲ ಕುಳಲಿ, ಹೊಳ್ಳೆಪ್ಪ ಬಾಡಗಿ, ಅರ್ಜುನ ಮೋಪ್ಪಗಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಗ್ರಾಮೀಣ ಸಂಸ್ಕೃತಿ ಮತ್ತು ಕೃಷಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಉತ್ಸವಗಳು ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವೈಭವದಿಂದ ಆಯೋಜಿಸುವ ಸಂಕಲ್ಪವನ್ನು ಜಾತ್ರಾ ಸಮಿತಿಯ ಪದಾಧಿಕಾರಿಗಳು ವ್ಯಕ್ತಪಡಿಸಿದರು
೨೨ mಟಠಿ ೦೩ ಪೋಟೊ