ಬೆಳಗಾವಿ - 20 : ಸಾಮಾಜಿಕ ತಾರತಮ್ಯದ ಬೇರುಗಳು ಆರ್ಥಿಕ ಅಸಮಾನತೆಯಲ್ಲಿರುವುದರಿಂದ ಸಾಮಾಜಿಕ ಸಮಾನತೆ ತರಲು ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂಬುದು ಬಸವಣ್ಣನವರ ಆದರ್ಶವಾಗಿತ್ತು ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು. ಅವರಿಂದು ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಸ್ಥಳೀಯ ಮಾನವ ಬಂಧುತ್ವ ವೇದಿಕೆಯು ಏರ್ಪಡಿಸಿದ್ದ ಮಾನವತಾವಾದಿ ಬಸವಣ್ಣನವರ ಜನ್ಮದಿನ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಮೇಲು ಕೀಳು, ಬಡವ ಬಲ್ಲಿದ, ಗಂಡು ಹೆಣ್ಣು ತಾರತಮ್ಯಕ್ಕೆ ಮೂಲ ಕಾರಣ ಆರ್ಥಿಕ ಅಸಮಾನತೆಯಾಗಿರುವುರಿಂದ ಅದನ್ನು ಪಲ್ಲಟಗೊಳಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ಬುದ್ಧನ ನಂತರ ಸಂಪತ್ತಿನ ಕ್ರೋಢೀಕರಣವನ್ನು ವೈಚಾರಿಕ ನೆಲೆಯಲ್ಲಿ ವಿರೋಧಿಸಿದ ಬಸವಣ್ಣನವರು ಕಾಯಕ ಮತ್ತು ತ್ರಿವಿಧ ದಾಸೋಹದ ಮೂಲಕ ಆರ್ಥಿಕ ಸಮಾನತೆಗೆ ಹೊಸ ದಾರಿ ತೋರಿದರು ಎಂದು ಡಾ. ಹಿಮ್ಮಡಿ ವಿವರಿಸಿದರು.
ಆರಂಭದಲ್ಲಿ ಶ್ರೀಮತಿ ಶಾಂತಾ ಕೋಲ್ಕಾರ್ ಮತ್ತು ಶ್ರೀಮತಿ ಕಾವೇರಿ ಗಾವಡೆ ಬಸವಣ್ಣನವರ ಭಾವಚಿತ್ರಕ್ಕೆ ಆರತಿ ಬೆಳಗಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ಕೋಲ್ಕಾರ್, ಸನ್ನಿ ಬನ್ಸ್, ಭಾಗ್ಯಶ್ರೀ ಗಾವಡೆ, ತೇಜಸ್ ಗಾವಡೆ, ಸ್ವಾನಂದಿ ಗಾವಡೆ, ಅಂಕುಶ ಗಾವಡೆ, ಮನೋಜ ನೇಸರಿಕರ ಇತರರು ಉಪಸ್ಥಿತರಿದ್ದರು. ಪ್ರಕಾಶ್ ಬೊಮ್ಮಣ್ಣವರ್ ಸ್ವಾಗತಿಸಿದರು, ಅಂಕುಶ್ ಪಾಟೀಲ ವಂದಿಸಿದರು, ಕಿರಣ ಕಾಂಬಳೆ ನಿರೂಪಿಸಿದರು.