ಬಳ್ಳಾರಿ, ಮೇ.14: ತೋರಣಗಲ್ಲು ಉಪ ವಿಭಾಗ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ–2023ರ ಕಲಂ 163ರ ಅನ್ವಯ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆಯನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿಯ ಮುಖಂಡರು ಬಳ್ಳಾರಿಯ ಉಪ ವಿಭಾಗಾಧಿಕಾರಿಗಳು ಹಾಗೂ ಉಪ ವಿಭಾಗದ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂ/ಕಂ/ಎಂಎಜಿ/ಕಾಸು/45/2025-26 ಆದೇಶದನ್ವಯ ಏಪ್ರಿಲ್ 27ರಿಂದ ಮೇ 14ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ ಈ ಆದೇಶದ ವಿರುದ್ಧ ರೈತರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದಿಂದ ತಡೆಯಾಜ್ಞೆ ದೊರೆತಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮಾನ್ಯ ಪೊಲೀಸ್ ಉಪಾಧೀಕ್ಷಕರು, ತೋರಣಗಲ್ಲು ಉಪ ವಿಭಾಗ ಇವರ ಪತ್ರ ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿಯ ನಡವಳಿಗಳ ಆಧಾರದ ಮೇಲೆ ಈ ಆದೇಶ ಹೊರಡಿಸಲಾಗಿತ್ತು. ಇದೀಗ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ರೈತರ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ನಿಷೇಧಾಜ್ಞೆ ಹಿಂಪಡೆಯಬೇಕು ಎಂದು ಭೂ ಸಂತ್ರಸ್ತರ ಹೋರಾಟ ಸಮಿತಿಯ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೂ ಸಂತ್ರಸ್ತರ ಹೋರಾಟ ಸಮಿತಿಯ ಹಿರಿಯ ಮುಖಂಡರು, ಸಿಐಟಿಯು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿಗಳು, ಸಿಐಟಿಯು ರಾಜ್ಯ ಉಪಾಧ್ಯಕ್ಷರು, ರಕ್ಷಣಾ ವೇದಿಕೆ ಗೌರವಾಧ್ಯಕ್ಷರು ಹಾಗೂ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಮುಖರಾದ ಜೆ. ಸತ್ಯಬಾಬು, ಕೆ. ಜಂಗ್ಲಿ ಸಾಬು, ಎಂ. ತಿಪ್ಪೇಸ್ವಾಮಿ ಸೇರಿದಂತೆ ಹಲವು ಮುಖಂಡರು ಮನವಿ ಸಲ್ಲಿಸಿದರು.
