ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ (ಬಿಐಟಿಎಂ), ಬಳ್ಳಾರಿಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿAಗ್ ವಿಭಾಗದ ಪ್ರೊಫೆಸರ್ ಡಾ. ಜಗದೀಶ್ ಆರ್.ಎಂ. ಅವರು ತೈವಾನ್‌ನ ನ್ಯಾಷನಲ್ ಕೌಶಿಯುಂಗ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (ಎನ್.ಕೆ.ಯು.ಎಸ್.ಟಿ.) ಯ ಐಒಟಿ ಸೈಬರ್‌ಸಿಕ್ಯೂರಿಟಿ ಸಂಶೋಧನಾ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಪೋಸ್ಟ್ಡಾಕ್ಟರಲ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಈ ಸಂಶೋಧನಾ ಕಾರ್ಯಕ್ರಮವನ್ನು ಪ್ರೊ. ಚಿನ್-ಶಿಹ್ ಶೈ (ಎನ್.ಕೆ.ಯು.ಎಸ್.ಟಿ.) ಹಾಗೂ ಡಾ. ಮೊಹಮ್ಮದ್ ಅಲಿ ಹುಸ್ಸೇನ್, ಡೀನ್ (ಆರ್ & ಡಿ), ಶ್ರೀನಿಧಿ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಟೆಕ್ನಾಲಜಿ, ಹೈದರಾಬಾದ್ ಅವರ ಮಾರ್ಗದರ್ಶನದಲ್ಲಿ ಕೈಗೊಂಡಿದ್ದಾರೆ.
“ಐಒಟಿ ಬಳಸಿ ಬೆಳೆಗಳ ಮೇಲ್ವಿಚಾರಣೆಗಾಗಿ ಅಡಾಪ್ಟಿವ್ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನ” ಎಂಬ ಮಹತ್ವದ ಸಂಶೋಧನಾ ವಿಷಯದ ಮೇಲೆ ಕಾರ್ಯನಿರ್ವಹಿಸಿರುವ ಡಾ. ಜಗದೀಶ್ ಅವರು, ಈ ಶೈಕ್ಷಣಿಕ ಪ್ರಯಾಣವು ಅತ್ಯಂತ ಸಮೃದ್ಧ ಮತ್ತು ಜ್ಞಾನವರ್ಧಕ ಅನುಭವವಾಗಿದ್ದು, ಐಒಟಿ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ತಮ್ಮ ಸಂಶೋಧನಾ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಸಾಧನೆಯ ಕುರಿತು ಸಂಸ್ಥೆಯ ಅಧ್ಯಕ್ಷರಾದ ಡಾ. ಯಶವಂತ್ ಭೂಪಾಲ್ ಅವರು ಸಂತಸ ವ್ಯಕ್ತಪಡಿಸಿ, “ನಮ್ಮ ಸಂಸ್ಥೆಯ ಅಧ್ಯಾಪಕರು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಇದು ನಮ್ಮ ಸಂಸ್ಥೆಯ ಗೌರವವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ” ಎಂದು ತಿಳಿಸಿದ್ದಾರೆ.
ಸಂಸ್ಥೆಯ ನಿರ್ದೇಶಕರಾದ ವೈ. ಜೆ. ಪೃಥ್ವಿರಾಜ್ ಭೂಪಾಲ್ ಅವರು, “ಡಾ. ಜಗದೀಶ್ ಅವರ ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಸಂಶೋಧನೆ ಮತ್ತು ನವೀನತೆಯತ್ತ ಹೆಜ್ಜೆ ಇಡುವಂತೆ ಉತ್ತೇಜಿಸುತ್ತದೆ” ಎಂದು ಅಭಿನಂದಿಸಿದ್ದಾರೆ.
ಕಾಲೇಜಿನ ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ್ ಅವರು, “ಡಾ. ಜಗದೀಶ್ ಅವರ ಶ್ರಮ, ಸಮರ್ಪಣೆ ಮತ್ತು ಸಂಶೋಧನಾ ನಿಷ್ಠೆ ಪ್ರಶಂಸನೀಯವಾಗಿದ್ದು, ಅವರ ಸಾಧನೆ ಸಂಸ್ಥೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಇಂತಹ ಸಾಧನೆಗಳು ಇತರ ಅಧ್ಯಾಪಕರಿಗೂ ಮಾದರಿಯಾಗಲಿ” ಎಂದು ಶ್ಲಾಘಿಸಿದ್ದಾರೆ.
ಡೀನ್‌ಗಳು, ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಡಾ. ಜಗದೀಶ್ ಆರ್.ಎಂ. ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.