ಬೆಳಗಾವಿ, ಮೇ 15: ಏಕಸ್ ಗ್ರೂಪ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಧಾರವಾಡ(ಐಐಟಿ-ಡಿ) ಜತೆಗೂಡಿ ಐಐಟಿ-ಡಿ ಕ್ಯಾಂಪಸ್‌ನಲ್ಲಿ ವಸ್ತು ವಿಜ್ಞಾನ(ಮೆಟೀರಿಯಲ್ಸ್ ಸೈನ್ಸ್) ಮತ್ತು ಉತ್ಪಾದನಾ ನಾವೀನ್ಯತೆಯ ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಿವೆ.
ಈ ಸೌಲಭ್ಯವು ಸುಧಾರಿತ ವಸ್ತುಗಳ ಗುಣಲಕ್ಷಣ, ವೈಫಲ್ಯ ವಿಶ್ಲೇಷಣೆ, ಉತ್ಪಾದನಾ ವಿಧಾನದ ಪ್ರತ್ಯನುಕರಣೆ(ಸಿಮ್ಯುಲೇಶನ್) ಮತ್ತು ಕಾರ್ಯಸಾಧು ಪರಿಣಾಮಕಾರಿತ್ವ (ಆಪ್ಟಿಮೈಸೇಷನ್) ಬೆಂಬಲಿಸಲು ಸಜ್ಜುಗೊಂಡಿದೆ, ಇದು ನಿಖರತೆ-ಚಾಲಿತ ಉತ್ಪಾದನಾ ಕ್ಷೇತ್ರಗಳಲ್ಲಿ ಆಳವಾದ ಉದ್ಯಮ-ಶೈಕ್ಷಣಿಕ ಸಹಭಾಗಿತ್ವವನ್ನು ಸಕ್ರಿಯಗೊಳಿಸುತ್ತದೆ.
ಈ ಉಪಕ್ರಮವು ಮುಂಬರುವ ದಿನಗಳಲ್ಲಿ ಅನ್ವಯಿಕ ಸಂಶೋಧನೆಯನ್ನು ಹೆಚ್ಚಿಸಲು, ನಾವೀನ್ಯತೆಯನ್ನು ಬೆಳೆಸಲು ಮತ್ತು ಪ್ರಯೋಗಾಲಯ ವಿಜ್ಞಾನ ಮತ್ತು ಕೈಗಾರಿಕಾ ಅನ್ವಯಿಕೆಗಳ ನಡುವಿನ ಅಂತರ ಕಡಿಮೆ ಮಾಡಲು ಸಮರ್ಪಿತವಾದ "ಐಐಟಿ ಧಾರವಾಡ - ಏಕಸ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ"ಕ್ಕೆ ಭದ್ರ ಬುನಾದಿ ಹಾಕುತ್ತದೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಏಕಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ ಅರವಿಂದ್ ಮೆಲ್ಲಿಗೇರಿ, "ಈ ಪಾಲುದಾರಿಕೆಯು ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ನಿರಂತರ ಹೂಡಿಕೆಗಳ ಮೂಲಕ ಭಾರತದ ಮುಂದುವರಿದ ಉತ್ಪಾದನಾ ಪರಿಸರ ವ್ಯವಸ್ಥೆ ಬಲಪಡಿಸುವ ಏಕಸ್ ನ ದೀರ್ಘಕಾಲೀನ ಬದ್ಧತೆಯನ್ನು ಪ್ರತಿಬಿಂಬಿಸುತ್ತಿದೆ. ಈ ಸಹಭಾಗಿತ್ವವು ಐಐಟಿ-ಧಾರವಾಡದ ಅನ್ವಯಿಕ ಸಂಶೋಧನಾ ಸಾಮರ್ಥ್ಯಗಳು ಮತ್ತು ಉದ್ಯಮದ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ಜತೆಗೆ ಏಕಸ್ ತನ್ನ ಗ್ರಾಹಕರಿಗೆ ಅತ್ಯಾಧುನಿಕ ಉತ್ಪನ್ನಗಳನ್ನು ತಲುಪಿಸಲು ಅನುವು ಮಾಡಿಕೊಡುತ್ತದೆ" ಎಂದು ಹೇಳಿದರು.
"ಐಐಟಿ-ಧಾರವಾಡದ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ಆರ್. ದೇಸಾಯಿ ಮಾತನಾಡಿ," "ಈ ಸುಧಾರಿತ ವಸ್ತುಗಳ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯವನ್ನು ಏಕಸ್ ನೊಂದಿಗೆ ಕಾರ್ಯಗತಗೊಳಿಸುವ ಈ ಸಹಭಾಗಿತ್ವವು ಐಐಟಿ-ಧಾರವಾಡದಲ್ಲಿ ಉದ್ಯಮ-ಸಂಯೋಜಿತ ಸಂಶೋಧನೆಯನ್ನು ಬಲಪಡಿಸುವಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ. ಈ ಸಹಭಾಗಿತ್ವದಿಂದ ನಮ್ಮ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ನೈಜ-ಜಗತ್ತಿನ ಉತ್ಪಾದನಾ ಸವಾಲುಗಳಿಗೆ ನೇರವಾಗಿ ಒಡ್ಡಿಕೊಳ್ಳಲು ಸಾಧ್ಯವಾಗಲಿದೆ. ಅದೇ ಸಮಯದಲ್ಲಿ ಹೆಚ್ಚಿನ ಪ್ರಭಾವ ಅಥವಾ ಪರಿಣಾಮ ಬೀರುವ ಕೈಗಾರಿಕಾ ನಾವೀನ್ಯತೆಗಳಿಗೆ ಅರ್ಥಪೂರ್ಣ ಕೊಡುಗೆಗಳನ್ನು ನೀಡುತ್ತದೆ. ವಸ್ತು ವಿಜ್ಞಾನ ಮತ್ತು ಮುಂದುವರಿದ ಉತ್ಪಾದನೆಯ ಉದಯೋನ್ಮುಖ ಕ್ಷೇತ್ರಗಳಲ್ಲಿ ಆಳವಾದ ಶೈಕ್ಷಣಿಕ-ಉದ್ಯಮ ಏಕೀಕರಣಕ್ಕೆ ನಾವು ಇದನ್ನು ಒಂದು ಮಾದರಿಯಾಗಿ ನೋಡುತ್ತೇವೆ" ಎಂದು ಹೇಳಿದರು.
ಈ ಕೇಂದ್ರವು ವಸ್ತುಗಳ ನಡವಳಿಕೆ ಮತ್ತು ವೈಫಲ್ಯ ಕಾರ್ಯವಿಧಾನಗಳ ಬಗ್ಗೆ ವಿವರವಾದ ಒಳನೋಟಗಳನ್ನು ಸಕ್ರಿಯಗೊಳಿಸುತ್ತದೆ. ಸುಧಾರಿತ ಉತ್ಪನ್ನ ಗುಣಮಟ್ಟ, ಹೆಚ್ಚಿನ ವಿಶ್ವಾಸಾರ್ಹತೆ(ನಂಬಿಕೆ), ಕಡಿಮೆಯಾದ ವೈಫಲ್ಯ ದರಗಳು ಮತ್ತು ಹೆಚ್ಚು ಪರಿಣಾಮಕಾರಿ ಉತ್ಪಾದನಾ ಪ್ರಕ್ರಿಯೆಗಳಿಗೆ ಕೊಡುಗೆ ನೀಡುತ್ತದೆ, ವಿಶೇಷವಾಗಿ ಇದು ಹೆಚ್ಚಿನ ನಿಖರತೆ ಸೂಕ್ಷ್ಮ ಕೈಗಾರಿಕೆಗಳಿಗೆ ನಿರ್ಣಾಯಕವಾಗಿದೆ ಎಂದರು.
ಸಂಶೋಧನೆಯ ಜತೆಗೆ ಈ ಸೌಲಭ್ಯವು ಎಂಜಿನಿಯರ್ಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ನಡೆಸುತ್ತಿದೆ, ಲೋಹಗಳು ಮತ್ತು ಲೋಹೇತರ ವಸ್ತುಗಳ ಮುಂದುವರಿದ ವಿಶ್ಲೇಷಣೆಯಲ್ಲಿ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ. ತಾಂತ್ರಿಕ ಮೌಲ್ಯಮಾಪನಗಳು, ಸಲಕರಣೆಗಳ ಕಾರ್ಯಕ್ಷಮತೆ ಮೇಲ್ವಿಚಾರಣೆ ಮತ್ತು ನಿರ್ವಹಣಾ ಮೇಲ್ವಿಚಾರಣೆಯ ಮೂಲಕ ಏಕಸ್, ಈ ಆರ್ ಅಂಡ್ ಡಿ ಕೇಂದ್ರಕ್ಕೆ ಬೆಂಬಲ ನೀಡುವುದನ್ನು ಮುಂದುವರೆಸಿದೆ. ಈ ಮೂಲಕ ವೈಜ್ಞಾನಿಕ ಕಠಿಣತೆ ಮತ್ತು ಕಾರ್ಯಾಚರಣೆ ಶ್ರೇಷ್ಠತೆಯ ಉನ್ನತ ಗುಣಮಟ್ಟವನ್ನು ಖಚಿತಪಡಿಸುತ್ತಿದೆ ಎಂದರು.
