ಬಳ್ಳಾರಿ:16: ಎಐಎಂಎಸ್‌ಎಸ್‌ನ ನಿಯೋಗವೊಂದು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಹಿಳಾ ಒಳ ಕ್ರೀಡಾಂಗಣವನ್ನು ನಿರ್ಮಿಸುವಂತೆ ಮನವಿ ಮಾಡಿತು. ಈ ಸಂದರ್ಭದಲ್ಲಿ ಎಐಎಂಎಸ್‌ಎಸ್ ನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಈಶ್ವರಿ ಕೆ. ಎಂ. ಮಾತನಾಡಿ "ಇತ್ತೀಚಿಗೆ ಜಿಲ್ಲಾಡಳಿತವು ಅನಧಿಕೃತ ಒತ್ತುವರಿ ಜಮೀನುಗಳನ್ನು ತೆರವುಗೊಳಿಸಿ ನಂತರ ಅವುಗಳನ್ನು ಸರ್ಕಾರಿ ಉದ್ದೇಶಗಳಿಗೆ ಸರ್ಕಾರದ ಇಲಾಖೆಗಳ ಅಡಿಯಲ್ಲಿ ಜನರಿಗೆ ಅನುಕೂಲವಾಗುವ ಕಾರ್ಯಕ್ರಮ ರೂಪಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ಪತ್ರ ಬಿಡುಗಡೆ ಮಾಡಿದೆ. ಬಳ್ಳಾರಿ ತಾಲೂಕು, ಬಳ್ಳಾರಿ ನಗರದ ವಾರ್ಡ್ ಸಂಖ್ಯೆ ೨೪, ಮುಸೋನಿಕ್ ಹಾಲ್, ವಿಸ್ತೀರ್ಣ ೪.೪೪ ಎಕರೆ ಜಮೀನಿನಲ್ಲಿ ೪ ಎಕರೆ ಜಮೀನನ್ನು ಮಹಿಳೆಯರ ಒಳ ಕ್ರೀಡಾಂಗಣ ಉದ್ದೇಶಕ್ಕೆ ಮೀಸಲಿಟ್ಟಿರುವುದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಬಳ್ಳಾರಿ ಜಿಲ್ಲಾ ಸಮಿತಿಯು ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.
ಉದ್ದೇಶಿತ ಒಳ ಕ್ರೀಡಾಂಗಣದ ನಿರ್ಮಾಣವನ್ನು ಪ್ರಾರಂಭಿಸಬೇಕು. ಜೊತೆಗೆ ಈಜುಕೊಳವನ್ನು ನಿರ್ಮಿಸಬೇಕು. ಜೊತೆಯೆಲ್ಲೇ ಮಹಿಳೆಯರಿಗಾಗಿ ಜಿಮ್ ನ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರೀಡಾ ಸಾಮಗ್ರಿಗಳನ್ನು ಹಾಗೂ ವ್ಯಾಯಾಮ ಉಪಕರಣಗಳನ್ನು ಒದಗಿಸಿ ನಗರದ ಮಹಿಳೆಯರಿಗೆ ಅನುಕೂಲ ಮಾಡಿ ಕೊಡಬೇಕು. ಹಾಗೆಯೇ ಇದೇ ಆವರಣದಲ್ಲಿ ಮಹಿಳೆಯರಿಗಾಗಿ ಉದ್ಯಾನವನ, ಸಭಾಂಗಣ ಮತ್ತು ಗ್ರಂಥಾಲಯವನ್ನು ಸ್ಥಾಪಿಸಿದಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಮನವಿ ಮಾಡಿದರು.
ನಿಯೋಗದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ವಿಜಯಲಕ್ಷ್ಮಿ, ಸೌಮ್ಯ, ವಿದ್ಯಾ, ರೇಖಾ, ಅಭಿಲಾಷ ಉಪಸ್ಥಿತರಿದ್ದರು.