Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅನ್ನಭಾಗ್ಯ ಸೌಲಭ್ಯ ದುರುಪಯೋಗಕ್ಕೆ ಕಡಿವಾಣ; ಅಧಿಕಾರಿಗಳ ಡಿಜಿಟಲ್ ಕಾರ್ಯಾಚರಣೆ ತೀವ್ರ

ಬಳ್ಳಾರಿಯಲ್ಲಿ 4,764 ಬಿಪಿಎಲ್ ಕಾರ್ಡ್ ರದ್ದು

ಬಳ್ಳಾರಿ: 20..ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬಡವರಿಗಾಗಿ ರೂಪಿಸಲಾಗಿರುವ ಬಿಪಿಎಲ್ ಪಡಿತರ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದ ಸಾವಿರಾರು ಅನರ್ಹರು ಇದೀಗ ಸರ್ಕಾರದ ಡಿಜಿಟಲ್ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಆದಾಯ ತೆರಿಗೆ ಇಲಾಖೆ ಹಾಗೂ ಸಾರಿಗೆ ಇಲಾಖೆಯ ದತ್ತಾಂಶಗಳನ್ನು ಸಮನ್ವಯಗೊಳಿಸಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಜಿಲ್ಲೆಯಾದ್ಯಂತ 4,764 ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ಪ್ರಸ್ತುತ 24,773 ಅಂತ್ಯೋದಯ ಕಾರ್ಡ್ ಹಾಗೂ 2,74,280 ಬಿಪಿಎಲ್ ಕಾರ್ಡ್ಗಳು ಚಾಲ್ತಿಯಲ್ಲಿವೆ. ಬಡ ಕುಟುಂಬಗಳಿಗೆ ‘ಅನ್ನಭಾಗ್ಯ’ ಯೋಜನೆಯಡಿ ಉಚಿತ ಅಕ್ಕಿ ಹಾಗೂ ರಿಯಾಯಿತಿ ದರದಲ್ಲಿ ಪಡಿತರ ವಿತರಣೆ ನಡೆಯುತ್ತಿದ್ದು, ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೂ ಬಿಪಿಎಲ್ ಕಾರ್ಡ್ ಪ್ರಮುಖ ಆಧಾರವಾಗಿದೆ. ಆದರೆ, ಈ ಪಟ್ಟಿಯಲ್ಲಿಯೇ ಆರ್ಥಿಕವಾಗಿ ಸದೃಢರಾದವರು, ಆದಾಯ ತೆರಿಗೆ ಪಾವತಿಸುವವರು, ದೊಡ್ಡ ಪ್ರಮಾಣದ ಭೂಮಿ ಹೊಂದಿರುವವರು ಮತ್ತು ಐಷಾರಾಮಿ ವಾಹನಗಳಲ್ಲಿ ಸಂಚರಿಸುವವರೂ ಸೇರಿಕೊಂಡಿರುವುದು ಇಲಾಖೆ ಅಧಿಕಾರಿಗಳಿಗೆ ಆಘಾತ ಉಂಟುಮಾಡಿದೆ.
ಈವರೆಗೆ ಅನರ್ಹ ಕಾರ್ಡ್ ಪತ್ತೆ ಪ್ರಕ್ರಿಯೆ ಹೆಚ್ಚಾಗಿ ಸ್ಥಳೀಯ ಮಟ್ಟದ ಪರಿಶೀಲನೆ, ಮನೆಮನೆ ಭೇಟಿ ಹಾಗೂ ಸಾರ್ವಜನಿಕ ದೂರುಗಳ ಆಧಾರದಲ್ಲಿಯೇ ನಡೆಯುತ್ತಿತ್ತು. ಆದರೆ, ಈ ಬಾರಿ ಆಹಾರ ಇಲಾಖೆ ಸಂಪೂರ್ಣವಾಗಿ ಡಿಜಿಟಲ್ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ. ಪಡಿತರ ಚೀಟಿಗೆ ಕಡ್ಡಾಯಗೊಳಿಸಲಾದ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಹಾಗೂ ಪ್ಯಾನ್ ಕಾರ್ಡ್ ಮಾಹಿತಿಯೊಂದಿಗೆ ತಾಳೆ ಹಾಕಿ ಪರಿಶೀಲನೆ ನಡೆಸಲಾಗಿದೆ.
ಆದಾಯ ತೆರಿಗೆ ಇಲಾಖೆಯಿಂದ ಪಡೆದ ಮಾಹಿತಿಯ ಆಧಾರದಲ್ಲಿ ವರ್ಷಕ್ಕೆ ನಿಗದಿತ ಮಿತಿಗಿಂತ ಹೆಚ್ಚು ಆದಾಯ ಹೊಂದಿರುವವರ ವಿವರ ಸಂಗ್ರಹಿಸಲಾಯಿತು. ಇದೇ ವೇಳೆ ಸಾರಿಗೆ ಇಲಾಖೆಯ ದಾಖಲೆಗಳೊಂದಿಗೆ ಹೋಲಿಕೆ ನಡೆಸಿ, ಬಿಪಿಎಲ್ ಕಾರ್ಡ್ ಹೊಂದಿರುವವರ ಹೆಸರಿನಲ್ಲಿ ಟ್ಯಾಕ್ಸಿ ಹೊರತುಪಡಿಸಿ ಖಾಸಗಿ ನಾಲ್ಕು ಚಕ್ರದ ವಾಹನಗಳಿರುವುದನ್ನು ಪತ್ತೆ ಹಚ್ಚಲಾಗಿದೆ.
ಈ ಡಿಜಿಟಲ್ ಪರಿಶೀಲನೆಯಲ್ಲೇ ಸಾವಿರಾರು ಅನರ್ಹರು ಬಯಲಾಗಿದ್ದು, ಬಳ್ಳಾರಿ ನಗರ ಭಾಗದಲ್ಲಿಯೇ ಗರಿಷ್ಠ 3,960 ಕಾರ್ಡ್ಗಳು ರದ್ದಾಗಿವೆ. ನಗರ ಪ್ರದೇಶಗಳಲ್ಲಿ ಸರ್ಕಾರಿ ನೌಕರರು, ಸಣ್ಣ ಉದ್ಯಮಿಗಳು ಹಾಗೂ ಆರ್ಥಿಕವಾಗಿ ಸದೃಢ ಕುಟುಂಬಗಳು ಸಹ ಬಿಪಿಎಲ್ ಸೌಲಭ್ಯ ಪಡೆಯುತ್ತಿದ್ದ ವಿಚಾರ ಬಹಿರಂಗವಾಗಿದೆ.
ಆಹಾರ ಇಲಾಖೆಯ ಅಧಿಕಾರಿಗಳ ಪ್ರಕಾರ, ಬಿಪಿಎಲ್ ಕಾರ್ಡ್ ಪಡೆಯಲು ಸರ್ಕಾರ ನಿಗದಿಪಡಿಸಿರುವ ಮಾನದಂಡಗಳು ಸ್ಪಷ್ಟವಾಗಿವೆ. ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷ ಮೀರಿರಬಾರದು. ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ದೊಡ್ಡ ಸ್ವಂತ ಪಕ್ಕಾ ಮನೆ ಇರಬಾರದು. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ಸಮಾನ ಪ್ರಮಾಣದ ನೀರಾವರಿ ಭೂಮಿ ಹೊಂದಿದ್ದರೂ ಅನರ್ಹರಾಗುತ್ತಾರೆ. ಜೀವನೋಪಾಯಕ್ಕಾಗಿ ಬಳಸುವ ಆಟೊ ಅಥವಾ ಟ್ಯಾಕ್ಸಿ ಹೊರತುಪಡಿಸಿ ಖಾಸಗಿ ನಾಲ್ಕು ಚಕ್ರದ ವಾಹನ ಹೊಂದಿರುವವರಿಗೂ ಬಿಪಿಎಲ್ ಸೌಲಭ್ಯ ಲಭ್ಯವಿಲ್ಲ. ಆದಾಯ ತೆರಿಗೆ ಅಥವಾ ವೃತ್ತಿ ತೆರಿಗೆ ಪಾವತಿಸುವವರು ಸಂಪೂರ್ಣ ಅನರ್ಹರಾಗುತ್ತಾರೆ.
ಆದರೆ, ಈ ನಿಯಮಗಳನ್ನು ಉಲ್ಲಂಘಿಸಿ ಹಲವು ಮಂದಿ ವರ್ಷಗಳಿಂದ ಪಡಿತರ ಪಡೆಯುತ್ತಿದ್ದರೆಂಬ ಸಂಗತಿ ಈಗ ಹೊರಬಿದ್ದಿದೆ. ಕೇವಲ ಅಕ್ಕಿ ಮತ್ತು ಪಡಿತರ ಸೌಲಭ್ಯವಷ್ಟೇ ಅಲ್ಲದೆ, ಉಚಿತ ವೈದ್ಯಕೀಯ ಸೇವೆ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಸೇರಿದಂತೆ ಹಲವು ಯೋಜನೆಗಳ ಪ್ರಯೋಜನಕ್ಕೂ ಬಿಪಿಎಲ್ ಕಾರ್ಡ್ ಬಳಸಲಾಗುತ್ತಿದೆ. ಇದರಿಂದ ನಿಜವಾದ ಅರ್ಹ ಬಡ ಕುಟುಂಬಗಳಿಗೆ ಸಿಗಬೇಕಾದ ಸೌಲಭ್ಯದಲ್ಲಿ ಅನ್ಯಾಯವಾಗುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲೂ ಕೇಳಿಬರುತ್ತಿದೆ.
ಜಿಲ್ಲಾವಾರು ಅಂಕಿಅಂಶಗಳ ಪ್ರಕಾರ, ಬಳ್ಳಾರಿ ತಾಲೂಕಿನಲ್ಲಿ ಅತಿ ಹೆಚ್ಚು 3,960 ಕಾರ್ಡ್ಗಳು ರದ್ದಾಗಿದ್ದರೆ, ಸಿರಗುಪ್ಪದಲ್ಲಿ 243, ಕುರುಗೋಡಿನಲ್ಲಿ 190, ಸಂಡೂರಿನಲ್ಲಿ 168 ಹಾಗೂ ಕಂಪ್ಲಿಯಲ್ಲಿ 59 ಕಾರ್ಡ್ಗಳು ಅನರ್ಹವೆಂದು ಘೋಷಿಸಲ್ಪಟ್ಟಿವೆ.
ಈ ಕುರಿತು ಪ್ರತಿಕ್ರಿಯಿಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ದೇವರಾಜ್, “ಜಿಲ್ಲೆಯಲ್ಲಿ ಅನರ್ಹ ಪಡಿತರ ಕಾರ್ಡ್ಗಳನ್ನು ರದ್ದುಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದು ಕೇವಲ ಆರಂಭ ಮಾತ್ರ. ಇನ್ನಷ್ಟು ಪರಿಣಾಮಕಾರಿಯಾಗಿ ಪರಿಶೀಲನೆ ನಡೆಸಿ ಅರ್ಹರಿಗೆ ಮಾತ್ರ ಸೌಲಭ್ಯ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಸರ್ಕಾರದ ಸೌಲಭ್ಯಗಳು ನಿಜವಾದ ಬಡವರ ಕೈ ಸೇರಬೇಕಾದರೆ ಇಂತಹ ಡಿಜಿಟಲ್ ಪರಿಶೀಲನೆ ಹಾಗೂ ಇಲಾಖಾಂತರ ಸಮನ್ವಯ ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಡಿದ್ದು ತೇಜೋಮಯಿ ಗದ್ದಿಗೆ ಆರ್ಯಭಟ ಪ್ರಶಸ್ತಿನ ಪ್ರದಾನಹುನಗುಂದ; ಒಳ್ಳೆಯ ಶಿಕ್ಷಣ ನೀಡಿದರೆ ಜೀವನ ಪರ್ಯಂತ ಅದರ ಉಪಯೋಗ  :ಶಾಸಕ ಬಾಬಾಸಾಹೇಬ ಪಾಟೀಲ ಲಕ್ಕುಂಡಿ, ಜಕನಾಯ್ಕನಕೊಪ್ಪ ಗ್ರಾಮಗಳ ಅನೇಕ ಕಾಮಗಾರಿಗಳಿಗೆ ಚಾಲನೆ.ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿ: ನಿಂಗಪ್ಪ ಮಸಳಿಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಅನುಮೋದನೆ ರಾಜ್ಯಪಾಲರಿಗೆ ಸಚಿವ ಸಂತೋಷ್ ಲಾಡ್ ಮನವಿ  ಹುಕ್ಕೇರಿ ತಾಲೂಕು ಸಮಗ್ರ ನೀರಾವರಿ ಯೋಜನೆ ಜಾರಿಯಾಗಲಿ :ಚೂನಪ್ಪ ಪೂಜೇರಿ.ಸರ್ಕಾರದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಾಹಿಸಿ ನೊಂದ ಮಹಿಳೆಯರಿಗೆ ನ್ಯಾಯ, ಬದುಕಿನ ಬರವಸೆ ತುಂಬುವ ಆಶಾಕಿರಣಗಳಾಗಬೇಕು; ಡಾ. ನಾಗಲಕ್ಷ್ಮಿ ಚೌದರಿಕೊಪ್ಪಳ ಜಿಲ್ಲೆಯಲ್ಲಿ ರಸಗೊಬ್ಬರ ವಿತರಣೆ ಸಮರ್ಪಕವಾಗಿ ನಡೆಯಲಿ: ಜಿಲ್ಲಾಧಿಕಾರಿ ಡಾ.ಸುರೇಶ ಬಿ ಇಟ್ನಾಳ ಕಟ್ಟುನಿಟ್ಟಿನ ನಿರ್ದೇಶನಚರಿತ್ರೆ ಅರಿಯಲು ವಸ್ತುಸಂಗ್ರಹಾಲಯಗಳು ಸಹಕಾರಿ: ಟಿ.ಜಿ.ವಿಠ್ಠಲ