ಜಮಖಂಡಿ;ತಾಲುಕಿನ ಹಿಪ್ಪರಗಿ ಕೃಷ್ಣಾ ನದಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 86 ಮೆಟ್ರಿಕ್‌ಟನ್ ಮರಳನ್ನು ಅಧಿಕಾರಿಗಳ ತಂಡ ವಶ ಪಡಿಸಿಕೊಂಡಿದೆ. ಕೃಷ್ಣಾ ನದಿಯಲ್ಲಿ ನೀರು ಬತ್ತಿ ಹೋಗಿದ್ದರಿಂದ ಮರಳು ದಂಧೆ ಖೋರರಿಗೆ ಅನುಕೂಲವಾಗಿದ್ದು ನದಿ ಪಾತ್ರವನ್ನು ಬಗೆಯಲು ಮುಂದಾಗಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮರಳು ದಂಧೆ ನಡೆಯುತ್ತಿದೆ. ಇದಕ್ಕೆ ಕಾಣದ ಕೈಗಳ ಬೆಂಲವೂ ಇದೆ. ಪತ್ರಿಕೆಗಳಲ್ಲಿ ಅಕ್ರಮ ಮರಳು ಗಾರಿಕೆಯ ಕುರಿತಾಗಿ ವರದಿಗಳು ಪ್ರಕಟವಾಗುತ್ತಿದ್ದಂತೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ನೇತೃತ್ವದಲ್ಲಿ ತಾಲುಕು ಮರಳು ಉಸ್ತುವಾರಿ ಸಮಿತಿ ಸಭೆ ನಡೆಸಿದ ಅಧಿಕಾರಿಗಳು, ಅಕ್ರಮ ಮರಳು ದಂಧೆಯನ್ನು ತಡೆಯಲು ನಿರ್ಧರಿಸಿ, ತಹಸೀಲ್ದಾರ ಅನೀಲ ಬಡಿಗೇರ, ಗ್ರಾಮಿಣ ಪಿಎಸ್‌ಐ ಗಂಗಾಧರ ಪೂಜಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ತಾಲುಕು ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಹಿಪ್ಪರಗಿಯ ನದಿ ದಡ ಹಾಗೂ ಗೈರಾಣ ಜಮೀನು, ಸ್ಮಶಾನ ಜಾಗೆ ಹಾಗೂ ಶಾಲಾ ಆವರಣದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 86 ಮೆಟ್ರಿಕ್ ಟನ್ ನಷ್ಟು ಮರಳನ್ನು ವಶ ಪಡಿಸಿಕೊಂಡಿದ್ದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ ಸದರಿ ಮರಳನ್ನು ನದಿಪಾತ್ರದ ತಗ್ಗು ಪ್ರದೇಶಗಳನ್ನು ತುಂಬುವದು ಹಾಗೂ ಶಾಲಾ ಆವರಣ ಇನ್ನಿತರ ಕಡೆಗಳಲ್ಲಿ ಸಂಗ್ರಹಿಸಲಾದ ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ನಿಯಮಾವಳಿ ಅನುಸಾರ ಉಪಯೋಗಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಮರಳು ಸಂಗ್ರಹಿಸುತ್ತಿದ್ದವರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.
ಜಿಲ್ಲಾಧಿಕಾರಿ ಆದೇಶ
ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವ ದೆಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಅವರು ಜಿಲ್ಲೆಯಾದ್ಯಂತ ನದಿ, ಹಳ್ಳ, ಕೆರೆ, ಮುಂತಾದ ಕಡೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ವರದಿಗಳು ಪ್ರಕಟವಾಗಿದೆ ಅಲ್ಲದೇ ಸಾರ್ವಜನಿಕರ ದೂರುಗಳು ಬಂದಿರುವ ಹಿನ್ನೆಯಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಭೆ ನಡೆಸಿ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.ಮರಳು ಗಣಿ ಗಾರಿಕೆಯಿಂದ ಅಂತರ್ಜಲ ಮಟ್ಟದ ಕುಸಿತ, ಪರಿಸರಹಾನಿ, ನದಿಗಳ ಪಥ ಬದಲಾವಣೆ, ಪ್ರವಾಹ ಪರಿಸ್ಥಿತಿ, ಸರ್ಕಾರಕ್ಕೆ ಆರ್ಥಿಕ ನಷ್ಟ ಜತೆಗೆ ಕಾನೂನು ಮತ್ತು ಸೂ ವ್ಯವಸ್ಥೆಯ ಮೇಲು ಗಂಭೀರ ಪರಿಣಾಮ ಬೀಳುತ್ತದೆ ಎಂದು ತಿಳಿಸಿದ್ದಾರೆ.ಅಕ್ರಮ ಮರಳು ಸಾಗಾಣಿಕೆ ವಾಹನಗಳು, ಯಂತ್ರಗಳನ್ನು ವಶ ಪಡಿಸಿಕೊಂಡು ಸಂಬಂಧ ಪಟ್ಟವರ ವಿರುದ್ಧ ಪ್ರಕರಣ ದಾಖಲಿಸು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ. ಅಕ್ರಮ ಮರಳು ದಂಧೆಯಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು ಕಂಡು ಬಂದಲ್ಲಿ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.