ಬಳ್ಳಾರಿ,ಜು.10: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯ ೭೮ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಇಂದು ಬಳ್ಳಾರಿ ಎಬಿವಿಪಿ ಕಾರ್ಯಾಲಯದ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ವಿಜೃಂಭಣೆಯಿAದ ನೆರವೇರಿಸಲಾಯಿತು.
ಕಾರ್ಯಕ್ರಮಕ್ಕೆ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಎನ್. ರವಿಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಎಬಿವಿಪಿಯ ರಾಷ್ಟ್ರ ನಿರ್ಮಾಣದ ಸಂಕಲ್ಪ, ವಿದ್ಯಾರ್ಥಿ ಹಿತದ ಕಾರ್ಯಗಳು ಹಾಗೂ ಯುವಜನರಲ್ಲಿ ದೇಶಭಕ್ತಿಯ ಮನೋಭಾವ ಬೆಳೆಸುವಲ್ಲಿ ಎಬಿವಿಪಿಯ ಪಾತ್ರವನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಎಬಿವಿಪಿಯ ಕೇಂದ್ರೀಯ ಕಾರ್ಯಸಮಿತಿ ಸದಸ್ಯರು ಹಾಗೂ ಬಳ್ಳಾರಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಸಚಿನ್ ಕುಳಗೇರಿ, ಜಿಲ್ಲಾ ಪ್ರಮುಖರಾದ ಡಾ. ರಾಮಕಿರಣ, ಶ್ರೀ ನಾಗರಾಜ ಬಟಗೇರಾ, ಶ್ರೀ ಟಿ. ಭರತ, ವಿಭಾಗ ಸಂಚಾಲಕರಾದ ಕೆ. ದಿಲೀಪ್ ಕುಮಾರ್, ನಗರ ಅಧ್ಯಕ್ಷರಾದ ಡಾ. ಮಂಗಳಾ ಬಿ.ಎನ್., ನಗರ ಕಾರ್ಯದರ್ಶಿಯಾದ ಶ್ರೀ ಬಸವಕಿರಣಗೌಡ, ವಿ.ಎಸ್.ಎಸ್. ಟ್ರಸ್ಟ್ ಪ್ರಮುಖರು, ಹಿರಿಯ ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಬಿವಿಪಿಯ ೭೮ ವರ್ಷಗಳ ಸೇವಾ ಪಯಣವನ್ನು ಸ್ಮರಿಸಿ, ವಿದ್ಯಾರ್ಥಿ ಸಮುದಾಯದ ಸಮಗ್ರ ಅಭಿವೃದ್ಧಿ ಹಾಗೂ ರಾಷ್ಟ್ರ ಪುನರ್‌ನಿರ್ಮಾಣಕ್ಕಾಗಿ ಸಂಘಟನೆಯು ಇನ್ನಷ್ಟು ಬದ್ಧತೆಯಿಂದ ಕಾರ್ಯನಿರ್ವಹಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು.