ಕೊಪ್ಪಳ ಏಪ್ರಿಲ್,16: ‘ಸಮಾಜದಲ್ಲಿ ಮೇಲು ಕೀಳು ಮತ್ತು ಬಡವ, ಶ್ರೀಮಂತ ಎಂಬ ತಾರತಮ್ಯ ಮನೋಭಾವ ನಾಗರಿಕರೆಲ್ಲರಲ್ಲಿಯೂ ಅಳಿಯಬೇಕು’ ಎನ್ನುವ ಬಾಬಾ ಸಾಹೇಬರ ಚಿಂತನೆ ಸರ್ವಕಾಲೀಕ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ವಿ ಡಾಣಿ ಅವರು ಹೇಳಿದರು.
ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಅಂಬೆಡ್ಕರ್ ಅವರ ಸಮಾನತೆ, ಶಿಕ್ಷಣ, ಮಹಿಳಾ ಹಕ್ಕುಗಳು ಹಾಗೂ ಕಾರ್ಮಿಕರ ಕಲ್ಯಾಣ ಅವರ ಕನಸುಗಳಾಗಿದ್ದವು. ಪ್ರತಿಯೊಬ್ಬರೂ ಇವುಗಳ ಮಹತ್ವ ಅರಿತು ನಡೆಯಬೇಕು. ಸ್ವಾತಂತ್ರ?ಯ ಪೂರ್ವದಲ್ಲಿದ್ದ ಅನಿಷ್ಟ ಪದ್ದತಿಗಳ ನಡುವೆ ಕಠಿಣ ಶ್ರಮವಹಿಸಿ ಓದಿ ಶಿಕ್ಷಣ ಪಡೆದು ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡುವ ಮೂಲಕ ಜನ ಸಾಮಾನ್ಯರಲ್ಲಿ ಸ್ವಾಭಿಮಾನ, ಶಿಕ್ಷಣ, ಹೋರಾಟದ ಪ್ರಜ್ಞೆ ಮೂಡಿಸುವಲ್ಲಿ ಬಾಬಾ ಸಾಹೇಬರು ಅಗ್ರಗಣ್ಯರು ಎಂದು ನುಡಿದರು.
ಕುಲಸಚಿವ ಪ್ರೊ.ಕೆ.ರಮೇಶ ಮಾತನಾಡಿ ದೇಶಭಕ್ತಿ, ಪ್ರಜಾಪ್ರಭುತ್ವ ಎರಡು ಕಣ್ಣುಗಳು ಇದ್ದ ಹಾಗೆ ಹೋರಾಟ, ಕ್ರಾಂತಿ ಹಾಗೂ ಶಿಕ್ಷಣ ಇವುಗಳು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತವೆ ಎನ್ನುವ ಚಿಂತನೆ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಳ ಸಮುದಾಯದವರಿಗಷ್ಟೆ ಅಲ್ಲ ಎಲ್ಲಾ ಮಾನವರಿಗೂ ಬೇಕಾಗುವ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕ ವಿರೇಶ ಉತ್ತಂಗಿ, ಪಾರ್ವತಿ ಕನಕಗಿರಿ, ಪ್ರವೀಣ ಪಾಟೀಲ್, ಪ್ರದರ್ಶನ ಕಲಾ ವಿಭಾಗದ ಅನಂತ ಕುಮಾರ ದೊರೆ, ರಾಜ್ಯಶಾಸ್ತ್ರ ವಿಭಾಗದ ಮೌಲಾಸಾಬ್, ಮಂಜುನಾಥ ಪೂಜಾರ, ಪತ್ರಿಕೋದ್ಯಮ ವಿಭಾಗದ ಸೃಷ್ಠಿ ಕಾವಳ್ಕರ್, ವಾಣಿಜ್ಯಶಾಸ್ತ್ರ ವಿಭಾಗದ ಅಲ್ತಾಫ್ ಹುಸೇನ್, ಅರ್ಥಶಾಸ್ತ್ರ ವಿಭಾಗದ ನಾಗರಾಜ್ ಹಾಗೂ ಎಲ್ಲಾ ವಿಭಾಗಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.
ಮೇಲು, ಕೀಳು ಕಳೆಯುವಲ್ಲಿ ಬಾಬಾಸಾಹೇಬರ ಚಿಂತನೆ ಸರ್ವಕಾಲೀಕ: ಪ್ರೊ.ಎಸ್.ವಿ ಡಾಣಿ


