ಹೊಸಪೇಟೆ: ಜಗತ್ತಿನ ತಲ್ಲಣಗಳು ಕಾವ್ಯದ ವಸ್ತುವಾಗಿರಬೇಕು. ಕವನ ರಚನೆಗೆ ಮುಖ್ಯವಾಗಿ ಬೇಕಾಗಿರುವುದು ಭಾಷೆ. ಜೊತೆಗೆ ಪ್ರೀತಿಯೂ ಕಾವ್ಯದ ಸತ್ವವಾಗಿರಲಿ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತು ಕವಿತೆಗಳನ್ನು ರಚಿಸುವುದು ಅಗತ್ಯವಾಗಿದೆ ಎಂದು ಡಾ. ಜಾಜಿ ದೇವೇಂದ್ರಪ್ಪ ಕಿವಿಮಾತು ಹೇಳಿದರು.
ನಗರದ ಶ್ರೀ ಶಂಕರ ಆನಂದ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉದಯೋನ್ಮುಖ ಬರಹಗಾರರಿಗೆ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉದಯೋನ್ಮುಖ ಕವಿಗಳು ಗುರು, ತಾಯಿ ವಾತ್ಸಲ್ಯ, ತಂದೆಯ ಜವಾಬ್ದಾರಿ, ತ್ಯಾಗ, ಸಮಾಜ ಸುಧಾರಣೆ, ಪ್ರಕೃತಿ, ಪ್ರೇಮ, ಭಕ್ತಿ, ರೈತನ ಸಂಕಷ್ಟ ಕುರಿತ ಸ್ವರಚಿತ ಕವಿತೆಗಳನ್ನು ವಾಚನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಾಬು ರಾಜೇಂದ್ರ ಪ್ರಸಾದ್ ವಹಿಸಿದ್ದರು. ಮುಖ್ಯ ಅತಿಥಿಗಳಾದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದಾರುಕಸ್ವಾಮಿ, ಕನ್ನಡ ವಿಭಾಗದ ಮುಖ್ಯಸ್ಥ ಸಿ. ದೇವಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಡಾ. ವಿಜಯಲಕ್ಷ್ಮಿ ಜೆ. ನಿರೂಪಿಸಿದರು, ಡಾ. ಹುಲಿಗೆಮ್ಮ ಬಿ. ಸ್ವಾಗತಿಸಿದರು, ಡಾ. ದೊಡ್ಡ ಉಜ್ಜಪ್ಪ ವಂದಿಸಿದರು. ಪಿ. ಸೌಂದರ್ಯ ಪ್ರಾರ್ಥನೆ ಹಾಡಿದರು. ಡಾ. ಷಣ್ಮುಖಪ್ಪ, ಡಾ. ಗಿರಿಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು.