ಬಳ್ಳಾರಿ,ಆ.28:. ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ೨೦೨೬-೨೭ನೇ ಸಾಲಿನ ಪ್ರಥಮ ವರ್ಷದ ಎಂಜಿನಿಯರಿAಗ್ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಪರಿಚಯ ಕಾರ್ಯಕ್ರಮಅನ್ನು ಆಯೋಜಿಸಲಾಗಿತ್ತು.
ಪ್ರಥಮ ವರ್ಷದ ಎಂಜಿನಿಯರಿAಗ್ ವಿದ್ಯಾರ್ಥಿ ಸಂಯೋಜಕರಾದ ಡಾ. ಗಿರೀಶಾ ಹೊಸಳ್ಳಿ ಮಾತನಾಡಿ, “ಇಂದಿನ ವಿದ್ಯಾರ್ಥಿಗಳಿಗೆ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್, ಎಲೆಕ್ಟ್ರಿಕ್ ವಾಹನ ಸೇರಿದಂತೆ ಆಧುನಿಕ ತಂತ್ರಜ್ಞಾನದ ಅನೇಕ ಸೌಲಭ್ಯಗಳು ಲಭ್ಯವಿದ್ದು, ಅವುಗಳನ್ನು ಸಮಾಜದ ಒಳಿತಿಗಾಗಿ ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಮೊದಲ ವರ್ಷದಿಂದಲೇ ಜ್ಞಾನಾರ್ಜನೆ, ನವೀನತೆ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಿ, ತಮ್ಮ ಭವಿಷ್ಯದ ಗುರಿಗೆ ಸ್ಪಷ್ಟವಾದ ಮಾರ್ಗಸೂಚಿ ರೂಪಿಸಿಕೊಳ್ಳಬೇಕು. ಉತ್ತಮ ಆರೋಗ್ಯ, ದೈಹಿಕ ಮತ್ತು ಮಾನಸಿಕ ಸದೃಢತೆ ಶಿಕ್ಷಣದಲ್ಲಿ ಯಶಸ್ಸಿಗೆ ಅತ್ಯಂತ ಮುಖ್ಯ “ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ. ಎಚ್. ಮಹಾಬಲೇಶ್ವರ ಮಾತನಾಡಿ, “ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯವು ಈ ಭಾಗದಲ್ಲಿ ಸುಮಾರು ೪೬ ವರ್ಷಗಳ ಶೈಕ್ಷಣಿಕ ಸೇವೆ ಸಲ್ಲಿಸಿದ್ದು, ಸುಮಾರು ೨೫,೦೦೦ ಎಂಜಿನಿಯರ್ಗಳನ್ನು ರೂಪಿಸಿದೆ. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಸರ್ಕಾರಿ, ಖಾಸಗಿ, ಕೈಗಾರಿಕಾ ಹಾಗೂ ವಿದೇಶಿ ಸಂಸ್ಥೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಲಭ್ಯವಿರುವ ಗ್ರಂಥಾಲಯ, ಪ್ರಯೋಗಾಲಯ, ಬೋಧನಾ ಸೌಲಭ್ಯಗಳು ಹಾಗೂ ಪರಿಣಿತ ಬೋಧಕರ ಮಾರ್ಗದರ್ಶನವನ್ನು ಸಂಪೂರ್ಣವಾಗಿ ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕು. ಎಂಜಿನಿಯರಿAಗ್ ಎಂದರೆ ವಿಜ್ಞಾನ ಮತ್ತು ಗಣಿತದ ಜ್ಞಾನವನ್ನು ಮಾನವ ಹಾಗೂ ಸಮಾಜದ ಅಗತ್ಯಗಳಿಗೆ ಅನ್ವಯಿಸಿ ಪರಿಹಾರಗಳನ್ನು ರೂಪಿಸುವ ಕ್ಷೇತ್ರವಾಗಿದ್ದು, ವಿದ್ಯಾರ್ಥಿಗಳು ಭವಿಷ್ಯದ ಸಮಸ್ಯೆ ಪರಿಹಾರಕರಾಗಿ ಹಾಗೂ ರಾಷ್ಟ್ರ ನಿರ್ಮಾತೃಗಳಾಗಿ ಬೆಳೆಯಬೇಕು. ನಿಯಮಿತ ತರಗತಿಗಳಿಗೆ ಹಾಜರಾಗುವುದು, ಅಸೈನ್ಮೆಂಟ್ಗಳನ್ನು ಪೂರ್ಣಗೊಳಿಸುವುದು ಮತ್ತು ಗ್ರಂಥಾಲಯವನ್ನು ಗರಿಷ್ಠವಾಗಿ ಬಳಸಿಕೊಳ್ಳುವುದು ಯಶಸ್ಸಿನ ಪ್ರಮುಖ ಹಂತಗಳಾಗಿವೆ “ಎಂದು ಹೇಳಿದರು.
ಉಪ ಪ್ರಾಂಶುಪಾಲೆ ಡಾ. ಸವಿತಾ ಸೋನೋಳಿ ಮಾತನಾಡಿ, “ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಶಿಕ್ಷಣ ಅವಧಿಗೆ ಸ್ಪಷ್ಟವಾದ ದೃಷ್ಟಿಕೋನ ಮತ್ತು ಗುರಿಯನ್ನು ಹೊಂದಬೇಕು. ಪದವಿ ಪಡೆಯುವುದಷ್ಟೇ ಅಂತಿಮ ಗುರಿಯಾಗದೆ, ಉತ್ತಮ ಉದ್ಯಮಿ, ಕೈಗಾರಿಕೋದ್ಯಮಿ, ಸಂಶೋಧಕ, ಶಿಕ್ಷಣತಜ್ಞ ಅಥವಾ ಸಮಾಜಸೇವಕನಾಗಿ ಗುರುತಿಸಿಕೊಳ್ಳುವಂತಹ ಉನ್ನತ ಗುರಿಗಳನ್ನು ಹೊಂದಿ, ಅವುಗಳನ್ನು ಸಾಧಿಸಲು ಹಂತ ಹಂತವಾಗಿ ಪ್ರಯತ್ನಿಸಬೇಕು ಎಂದರು. ಆರ್.ವೈ.ಎಂ.ಇ.ಸಿ. ಉದ್ಯಮಿಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ತರಗತಿಯಲ್ಲಿ ಕಲಿಯುವ ಸೈದ್ಧಾಂತಿಕ ಜ್ಞಾನವನ್ನು ಉದ್ಯಮಿ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಅನ್ವಯಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. “ಶಿಕ್ಷಣ, ಸಂಸ್ಕೃತಿ ಮತ್ತು ಮಾನವ ಸಮಾಜದ ಅಭಿವೃದ್ಧಿ” ಎಂಬ ಸಂಸ್ಥೆಯ ಧ್ಯೇಯದೊಂದಿಗೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಪೋಷಕರೂ ಸಹ ಸಂಸ್ಥೆಯೊAದಿಗೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು” ಎಂದು ಕರೆ ನೀಡಿದರು. ಕಾರ್ಯಕ್ರಮದ ಮೂಲಕ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಶೈಕ್ಷಣಿಕ ವಾತಾವರಣ, ಸೌಲಭ್ಯಗಳು, ಶಿಸ್ತು, ಅವಕಾಶಗಳು ಹಾಗೂ ಭವಿಷ್ಯದ ಗುರಿಗಳ ಕುರಿತು ಮಾರ್ಗದರ್ಶನ ನೀಡಲಾಯಿತು. ವಿದ್ಯಾರ್ಥಿಗಳು ಜ್ಞಾನ, ಕೌಶಲ್ಯ, ಆರೋಗ್ಯ, ನವೀನತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಸಮನ್ವಯಗೊಳಿಸಿಕೊಂಡು ತಮ್ಮ ಎಂಜಿನಿಯರಿAಗ್ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಪ್ರೇರೇಪಿಸಲಾಯಿತು. ಕಾರ್ಯಕ್ರಮವನ್ನು ಗಂಗಾ ಮಹೇಶ್ ಸಜ್ಜನ್ ಅವರು ನಿರ್ವಹಿಸಿದರು. ವೀ.ವಿ.ಸಂಘದ ಅಧ್ಯಕ್ಷರು ಡಾ. ಕಣೇಕಲ್ ಮಹಾಂತೇಶ್, ಉಪಾಧ್ಯಕ್ಷರು ಮತ್ತು - ಆರ್.ವೈ.ಎಂ.ಇ.ಸಿ ಅಧ್ಯಕ್ಷರು ಜಾನಕುಂಟೆ ಬಸವರಾಜ್, ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್, ಸಹಾಯಕ ಕಾರ್ಯದರ್ಶಿ ಯಾಲ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿ ಬೈಲುವದ್ದಿಗೇರಿ ಎರ್ರಿಸ್ವಾಮಿ, ಆರ್.ವೈ.ಎಂ.ಇ.ಸಿ. ಬಳ್ಳಾರಿ, ಆಡಳಿತ ಮಂಡಳಿ ಸದಸ್ಯರು - ಶ್ರೀ ಪ್ರಭುಸ್ವಾಮಿ ಎಸ್.ಎಂ., ಬಾಡದ ಪ್ರಕಾಶ್, ಶುಭ ಹಾರೈಸಿದರು.