ತಾಳಿಕೋಟೆ, ತಾಳಿಕೋಟೆ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಶಾಖಾ ಮಠವಾದ ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿಯ ಶ್ರೀ ಖಾಸ್ಗತೇಶ್ವರ ಮಠದ ಜಾತ್ರೋತ್ಸವವು ಶ್ರೀಮಠದ ಪೀಠಾಧಿಪತಿ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರ ನೇತೃತ್ವದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಜಾತ್ರೋತ್ಸವದ ಅಂಗವಾಗಿ ಸಾಯಂಕಾಲ ರಥೋತ್ಸವಕ್ಕೂ ಮುನ್ನ ಶ್ರೀ ಖಾಸ್ಗತರ ಹಾಗೂ ವಿರಕ್ತಶ್ರೀಗಳ ಮಹಾಮೂರ್ತಿಗಳ ಆನೆ ಅಂಬಾರಿ, ಪಲ್ಲಕ್ಕಿ ಉತ್ಸವ ಹಾಗೂ ಕುಂಭಕಳಶಗಳ ಭವ್ಯ ಮೆರವಣಿಗೆ ನಡೆಯಿತು. ಸಾವಿರಾರು ಸುಮಂಗಲೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕರಡಿ ಮಜಲು, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.
ಭಕ್ತರೇ ೩೦ ಲಕ್ಷ ಸಂಗ್ರಹಿಸಿ ನೂತನ ರಥ ನಿರ್ಮಾಣ
ಶ್ರೀ ಖಾಸ್ಗತೇಶ್ವರ ಮಠಕ್ಕೆ ಭಕ್ತರು ತಮ್ಮ ಸ್ವಂತ ಕೊಡುಗೆಯಿಂದ ಸುಮಾರು ೩೦ ಲಕ್ಷ ಹಣವನ್ನು ಸಂಗ್ರಹಿಸಿ ನೂತನ ರಥವನ್ನು ನಿರ್ಮಿಸಿರುವುದು ಈ ಬಾರಿಯ ಜಾತ್ರೆಯ ವಿಶೇಷ ಆಕರ್ಷಣೆಯಾಗಿತ್ತು. ಭಕ್ತರ ಸಹಕಾರ, ಶ್ರದ್ಧೆ ಹಾಗೂ ಧಾರ್ಮಿಕ ಅಭಿಮಾನದಿಂದ ನಿರ್ಮಾಣಗೊಂಡ ಈ ನೂತನ ರಥದಲ್ಲಿ ಪ್ರಥಮ ಬಾರಿಗೆ ಹೂವಿನ ರಥೋತ್ಸವ ನಡೆಯಿತು.
ಶಿರಹಟ್ಟಿಯ ಫಕೀರೇಶ್ವರ ಮಠದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ವಿಶೇಷವಾಗಿ ಮುತೈದೆ ಮಹಿಳೆಯರೇ ರಥದ ಹಗ್ಗ ಹಿಡಿದು ಎಳೆಯುವ ಮೂಲಕ ಭಕ್ತಿಭಾವ ಮೆರೆದರು. ಮಹಿಳೆಯರು ರಥ ಎಳೆಯುವ ದೃಶ್ಯ ನೆರೆದಿದ್ದ ಭಕ್ತರ ಗಮನ ಸೆಳೆಯಿತು. ರಥ ಸಾಗುತ್ತಿದ್ದಂತೆ ಭಕ್ತರು ಬಾಳೆಹಣ್ಣು ಹಾಗೂ ಉತ್ತತ್ತಿ ಅರ್ಪಿಸಿ ಶ್ರೀ ಖಾಸ್ಗತೇಶ್ವರ ಮಹಾಶಿವಯೋಗಿಗಳಿಗೆ ಭಕ್ತಿ ಸಮರ್ಪಿಸಿದರು.
ಬೆಳಗ್ಗೆಯಿಂದಲೇ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಶ್ರೀಮಠದಲ್ಲಿ ಕಾಯಿ, ಕರ್ಪೂರ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಹೂವಿನಿಂದ ಅಲಂಕೃತಗೊಂಡ ನೂತನ ರಥ, ಆನೆ ಅಂಬಾರಿ, ಪಲ್ಲಕ್ಕಿ ಉತ್ಸವ ಹಾಗೂ ಕುಂಭಕಳಶಗಳ ವೈಭವದಿಂದ ಇಡೀ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿತ್ತು. ಭಕ್ತರೇ ಹಣ ಸಂಗ್ರಹಿಸಿ ರಥ ನಿರ್ಮಿಸಿರುವುದು ಗ್ರಾಮದ ಧಾರ್ಮಿಕ ಒಗ್ಗಟ್ಟು ಮತ್ತು ಭಕ್ತಿಪರಂಪರೆಗೆ ಸಾಕ್ಷಿಯಾಯಿತು. ಅಶ್ವಮೇದ ಸಾರೋಟಿನಲ್ಲಿ ಶ್ರೀಮಠದ ಸಿದ್ದಲಿಂಗಶ್ರೀಗಳನ್ನು ಮೆರವಣಿಗೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಅ.೨೬ ರಿಂದ ಆರಂಭಗೊಂಡಿದ್ದ ’ಮೊದಲು ಮಾನವನಾಗು’ ಎಂಬ ಪುರಾಣ ಪ್ರವಚನ ಕಾರ್ಯಕ್ರಮವು ಜಾತ್ರೋತ್ಸವದೊಂದಿಗೆ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಬಲಶೆಟ್ಟಿಹಾಳ ಗ್ರಾಮದ ಬಸವಲಿಂಗ ಶಿವಯೋಗಿಗಳು, ಕೊಡೇಕಲ್ ದುರದುಂಡೇಶ್ವರ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು, ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ. ಮುರುಘೇಶ ವಿರಕ್ತಮಠ ಸೇರಿದಂತೆ ಗ್ರಾಮದ ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ಅಪಾರ ಸಂಖ್ಯೆಯ ಮಹಿಳಾ ಮತ್ತು ಪುರುಷ ಭಕ್ತರು ಪಾಲ್ಗೊಂಡಿದ್ದರು.