ಧಾರವಾಡ: ಹುಬ್ಬಳ್ಳಿ-ಧಾರವಾಡ ಬೇಧ-ಭಾವ ಬೇಡ. ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಹು-ಧಾ ಅವಳಿ ನಗರಗಳಲ್ಲೂ ಕೂಡ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸೋಣ ಎಂದು ಮಹಾನಗರ ಪಾಲಿಕೆ ಮೇಯರ್ ದುರ್ಗಮ್ಮ ಬಿಜವಾಡ ಕರೆ ನೀಡಿದರು.
ನಗರದ ಮಹಾನಗರ ಪಾಲಿಕೆ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನ.1ರಂದು ಅವಳಿನಗರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಏರ್ಪಡಿಸಲಿದೆ ಎಂದು ತಿಳಿಸಿದರು.
ನ.1ಕ್ಕೆ ಧ್ವಜಾರೋಹಣ ಮಾಡೋಣ. ಮತ್ತೊಂದು ದಿನ ಕನ್ನಡಪರ ಸಂಘಟನೆ ಸಭೆ ಕರೆದು ಒಮ್ಮೆ ಧಾರವಾಡದಲ್ಲಿ ಭವ್ಯ ಮೆರವಣಿಗೆ, ಮತ್ತೊಂದು ದಿನ ಹುಬ್ಬಳ್ಳಿಯಲ್ಲಿ ಮೆರವಣಿಗೆ ಜೊತೆಗೆ ಧೀಮಂತ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸುವುದಾಗಿ ಹೇಳಿದರು.
ಅಲ್ಲದೇ, ಹುಬ್ಬಳ್ಳಿ-ಧಾರವಾಡ ಅವಳಿನಗರ ಕನ್ನಡಪರ ಸಂಘಟನೆಗಳು ಮುಖಂಡರ ವಿಶ್ವಾಸಕ್ಕೆ ತೆಗೆದುಕೊಂಡು ಒಂದೊಂದ ಜವಾಬ್ದಾರಿ ನೀಡುವುದಾಗಿಯೂ ಭರವಸೆ ನೀಡಿದ ಮೇಯರ್ ದುರ್ಗಮ್ಮ, ಪ್ರತಿ ಕೆಲಸವನ್ನೂ ಪ್ರಾಮಾಣಿಕವಾಗಿ ನಿರ್ವಹಿಸಲು ಹೇಳಿದರು.
ಜಯ ಕರ್ನಾಟಕ ಸಂಘಟನೆ ಗೌರವಾಧ್ಯಕ್ಷ ಲಕ್ಷಣ ದೊಡಮನಿ, ಮೆರವಣಿಗೆಗೆ ಅನಗತ್ಯ ಹಣ ವ್ಯಯಿಸದೆ, ಕನ್ನಡ-ಸಂಸ್ಕೃತಿ ಇಲಾಖೆಯಿಂದ ಕಲಾ ತಂಡಗಳನ್ನು ನೀಡಲಿದ್ದು, ಇವುಗಳ ಸದ್ಬಳಕೆಗೆ ಮಹಾನಗರ ಪಾಲಿಕೆ ಮುಂದಾದ ಬೇಕೆಂಬ ಸಲಹೆ ನೀಡಿದರು.
ಮೆರವಣಿಗೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮಹಿನೀಯರ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟರಾದ ಡಾ.ರಾಜಕುಮಾರ್, ಡಾ.ಅನಂತನಾಗ್, ತೆರೆಮರೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿದ ಡಾ. ಪುನೀತರಾಜಕುಮಾರ್ ಅವರ ಸ್ತಬ್ಧಚಿತ್ರ ಏರ್ಪಡಿಸಲು ಹೇಳಿದರು.
ಸಭೆಯಲ್ಲಿ ಉಪಮೇಯರ್ ಲಕ್ಷಿö್ಮಬಾಯಿ ನಾಝರೆ, ಪಾಲಿಕೆ ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಇದ್ದರು.