ಬಳ್ಳಾರಿ, 02: ಪ್ರತಿಭಟನೆ ಉದ್ದೇಶಿಸಿ ಎಸ್ಯುಸಿಐ (ಸಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎ. ದೇವದಾಸ್ ಮಾತನಾಡುತ್ತಾ "ರಾಜ್ಯ ಸರ್ಕಾರವು ಹಾಲಿನ ದರವನ್ನು ಪ್ರತಿ ಲೀಟರಿಗೆ ರೂ. 8ರಂತೆ ಹೆಚ್ಚಳ ಮಾಡಿರುವ ನಿರ್ಧಾರವನ್ನು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಹೈನುಗಾರರ ಸಮಸ್ಯೆಯನ್ನು ಪರಿಹರಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸುತ್ತೇವೆ ಎಂದರು.
ಎಸ್ಯುಸಿಐ (ಸಿ) ಪಕ್ಷದ ಮತ್ತೊರ್ವ ಮುಖoಡರಾದ ಡಾ. ಪ್ರಮೋದ್ ಮಾತನಾಡುತ್ತಾ ಮುಂಬರುವ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು, ಕರ್ನಾಟಕ ಹಾಲು ಒಕ್ಕೂಟದ ರಾಜಕಾರಣಿ ಪದಾಧಿಕಾರಿಗಳು ಗ್ರಾಮೀಣ ಹೈನುಗಾರರಿಗೆ ಬೆಂಬಲ ನೀಡುವ ಹೆಸರಿನಲ್ಲಿ ಇಂತಹ ಒತ್ತಾಯವನ್ನು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಸರ್ಕಾರ ಹಾಲು ಉತ್ಪಾದಕರ ಮತ್ತು ಗ್ರಾಹಕರ ಇಬ್ಬರ ಹಿತವನ್ನು ಪರಿಗಣಿಸಬೇಕು. ಮೇವು, ಪಶು ಆಹಾರ ಇತ್ಯಾದಿಗಳನ್ನು ರಿಯಾಯಿತಿ ದರದಲ್ಲಿ ಪೂರೈಸಬೇಕು. ಕೆಎಂಎಫ್ ನಲ್ಲಿರುವ ದುಂದುವೆಚ್ಚ ತಡೆಗಟ್ಟಬೇಕು. ಉತ್ಪಾದನೆಯ ವೆಚ್ಚ ಕಡಿಮೆ ಮಾಡುವ ಬದಲಿಗೆ ದರ ಹೆಚ್ಚಳವನ್ನೇ ಪರಿಹಾರ ಎಂದು ಪರಿಗಣಿಸಿದರೆ ಆಗ ಹಣದುಬ್ಬರದ ವಿಷಚಕ್ರಕ್ಕೆ ಎಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ. ಹಾಲು ಮಕ್ಕಳಿಗೆ ಸೇರಿದಂತೆ ಎಲ್ಲರಿಗೂ ಅವಶ್ಯಕ ಪೌಷ್ಟಿಕ ಆಹಾರವಾದ ಕಾರಣ ಸರ್ಕಾರ ತಕ್ಷಣವೇ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯಬೇಕು, ಇದಕ್ಕೆ ಒತ್ತಾಯಿಸಲು ರಾಜ್ಯದಾದ್ಯಂತ ಪ್ರತಿಭಟನೆಗೆ ಜನತೆ ಮುಂದಾಗಬೇಕು ಎಂದು ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷವು ಕರೆ ನೀಡುತ್ತದೆ ಎಂದರು.
ಪ್ರತಿಭಟನೆಯಲ್ಲಿ ಎಂ.ಎಎನ್. ಮಂಜುಳ, ಆರ್. ಸೋಮಶೇಖರ್ ಗೌಡ, ಡಿ.ನಾಗಲಕ್ಷ್ಮಿ, ಗೋವಿಂದ್, ಈಶ್ವರಿ, ಸುರೇಶ್, ವಿಜಯಲಕ್ಷ್ಮಿ, ಜೆ. ಪಿ. ರವಿಕಿರಣ್, ಜಗದೀಶ್, ಗುರಳ್ಳಿ ರಾಜ ಹಾಗೂ ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಿದ್ದರು