ಬಳ್ಳಾರಿ, ಸೆ. 24: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್ಒಯು) ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡು ಪದವಿಗಳನ್ನು ಪಡೆಯಲು ಅವಕಾಶವಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿ ದೂರಶಿಕ್ಷಣ ಕೋರ್ಸ್ಗಳಿಗೆ ಸೆಪ್ಟೆಂಬರ್ 30ರವರೆಗೆ ಪ್ರವೇಶ ಪಡೆಯಬಹುದು ಎಂದು ವಿಶ್ವವಿದ್ಯಾಲಯದ ಕುಲಪತಿ ಜ್ಞಾನಪ್ರಕಾಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗಸ್ಥರು, ನಿಯಮಿತ ಕಾಲೇಜುಗಳಿಗೆ ಹಾಜರಾಗಲು ಸಾಧ್ಯವಾಗದವರು, ಮಹಿಳೆಯರು ಸೇರಿದಂತೆ ಎಲ್ಲರಿಗೂ ಉನ್ನತ ಶಿಕ್ಷಣ ಪಡೆಯಲು ಕೆಎಸ್ಒಯು ಅವಕಾಶ ಕಲ್ಪಿಸಿದೆ ಎಂದರು.
“ಎಲ್ಲರಿಗೂ, ಎಲ್ಲೆಡೆ ಉನ್ನತ ಶಿಕ್ಷಣ” ಎಂಬ ಧ್ಯೇಯದೊಂದಿಗೆ ರಾಜ್ಯದಲ್ಲಿ ಸುಮಾರು 38 ಪ್ರಾದೇಶಿಕ ಕೇಂದ್ರಗಳು ಹಾಗೂ 75 ಪರೀಕ್ಷಾ ಕೇಂದ್ರಗಳನ್ನು ಹೊಂದಲಾಗಿದೆ. ಆನ್ಲೈನ್ ಮೂಲಕ ಎಲ್ಲಿಂದ ಬೇಕಾದರೂ ಪ್ರವೇಶ ಪಡೆದು ಶಿಕ್ಷಣ ಮುಂದುವರಿಸಬಹುದಾಗಿದೆ. ಆನ್ಲೈನ್ ತರಗತಿಗಳ ಜತೆಗೆ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಮೂಲಕ ಪಠ್ಯಕ್ರಮ ಹಾಗೂ ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಕೆಎಸ್ಒಯು ನೀಡುವ ಪದವಿಗಳು ನಿಯಮಿತ ಕಾಲೇಜುಗಳ ಪದವಿಗಳಿಗೆ ಸಮಾನವಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳಿಗೆ ಅರ್ಹವಾಗಿವೆ. ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಹಲವರು ಕೆಎಎಸ್, ಐಎಎಸ್ ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ತಿಳಿಸಿದರು.
ನ್ಯಾಕ್ ಮಾನ್ಯತೆ ಹೊಂದಿರುವ ಕೆಎಸ್ಒಯುನಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ 12,800 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ದೂರಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ವಿಶ್ವವಿದ್ಯಾಲಯದ ಬಳ್ಳಾರಿ ಕೇಂದ್ರವನ್ನು ಉತ್ತರ ಕರ್ನಾಟಕದ ನೋಡಲ್ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಕೆಎಸ್ಒಯು ಕೇಂದ್ರಕ್ಕೆ ಸಂಪರ್ಕ ರಸ್ತೆಗೆ ಮನವಿ
ನಲ್ಲಚರವು ಪ್ರದೇಶದಲ್ಲಿರುವ ಕೆಎಸ್ಒಯು ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ಹಾಗೂ ಉತ್ತಮ ಸೌಲಭ್ಯಗಳಿದ್ದರೂ, ಕೇಂದ್ರಕ್ಕೆ ತೆರಳಲು ಸೂಕ್ತ ರಸ್ತೆ ಸಂಪರ್ಕದ ಕೊರತೆಯಿದೆ. ಯುವ ಸಬಲೀಕರಣ ಇಲಾಖೆಯಿಂದ ರಸ್ತೆಯನ್ನು ಬಂದ್ ಮಾಡುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಕೆಎಸ್ಒಯು ಕೇಂದ್ರಕ್ಕೆ ಸುಗಮ ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಜ್ಞಾನಪ್ರಕಾಶ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಎನ್. ಆನಂದಗೌಡ, ಅರುಣ್ ಸುರೇಶ್, ಮೈತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.