ಬಳ್ಳಾರಿ, ಅ.10: ನಗರದ ತಾಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.8ರಂದು ಮಧು (27) ಎಂಬುವವರು ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ, ತಾಳೂರು ರಸ್ತೆಯ ಶ್ರೀ ನಂದಿ ಕಿರಾಣಿ ಅಂಗಡಿ ಮುಂಭಾಗದಲ್ಲಿ ಆರೋಪಿಗಳು ಮೋಟರ್‌ಸೈಕಲ್‌ಗಳಲ್ಲಿ ಬಂದು ಕಾರಿಗೆ ಅಡ್ಡಗಟ್ಟಿ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದರು.
ಪ್ರಕರಣ ದಾಖಲಿಸಿಕೊಂಡ ಗಾಂಧಿನಗರ ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದರು. ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅ.9ರ ಬೆಳಗಿನ ಜಾವ ಕೊಪ್ಪಳ ಜಿಲ್ಲೆಯ ಕನಕಗಿರಿ ಸಮೀಪ ಐವರನ್ನು ವಶಕ್ಕೆ ಪಡೆದು ವಿಚಾರಣೆ ಬಳಿಕ ಬಂಧಿಸಿದ್ದಾರೆ.
ಬಂಧಿತರನ್ನು ತಾಳೂರು ರಸ್ತೆಯ ಸತೀಶ್ (34), ವಿಕ್ರಮ್ ಅಲಿಯಾಸ್ ವಿಕ್ಕಿ (33), ಬೆಳಗಲ್ ಕ್ರಾಸ್‌ನ ರವಿ ಅಲಿಯಾಸ್ ಡೀಲ್ ರವಿ (36), ಬಸವನಕುಂಟೆಯ ಶೆಕ್ಷಾವಲಿ (28) ಹಾಗೂ ಇಂದಿರಾನಗರದ ಕಲೀಲ್ ಬಾಷಾ (28) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕಾರು, ಮೂರು ಮೋಟರ್‌ಸೈಕಲ್‌ಗಳು ಹಾಗೂ ಹಲ್ಲೆಗೆ ಬಳಸಿದ ಕಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಒಟ್ಟು ಒಂಬತ್ತು ಮಂದಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದ್ದು, ಉಳಿದ ನಾಲ್ವರು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಬಂಧಿತ ಸತೀಶ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದ್ದು, ರವಿ ಅಲಿಯಾಸ್ ಡೀಲ್ ರವಿ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ. ಆತನ ವಿರುದ್ಧ ಕೊಲೆ, ದರೋಡೆ, ಜೂಜಾಟ ಹಾಗೂ ಹಲ್ಲೆ ಸೇರಿದಂತೆ ಐದು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್ಪಿ ಗೋವಿಂದರಾಜುಲು ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ರವಿಚಂದ್ರನ್ ಡಿ.ಬಿ., ಮಹಾಂತೇಶ್, ಮೊಹಮ್ಮದ್ ರಫೀಕ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಪ್ರಕರಣವನ್ನು ಪತ್ತೆಹಚ್ಚಿದ್ದು, ತಂಡದ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.