ಬಳ್ಳಾರಿ, ಅ.16: 2.50 ಲಕ್ಷ ರೂ. ಹೂಡಿಕೆ ಹಣದ ವಿವಾದಕ್ಕೆ ಸಂಬಂಧಿಸಿದಂತೆ ತವಕ್ಕಲ್ ಎಂಟರ್ಪ್ರೈಸಸ್ ಮಾಲೀಕ ಹಾಜಿ ಮಲಂಗ್ ಮಾಡಿರುವ ಹಣ ದುರುಪಯೋಗ ಮತ್ತು ಹಲ್ಲೆ ಆರೋಪಗಳನ್ನು ಅಬೂಬಕ್ಕರ್ ಸಿದ್ದಿಕಿ ತಳ್ಳಿಹಾಕಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ವೈಯಕ್ತಿಕ ದ್ವೇಷದಿಂದ ಸುಳ್ಳು ಆರೋಪ ಮಾಡಲಾಗಿದೆ ಎಂದು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಜಿ ಮಲಂಗ್ ಅವರ ಎಸಿ ಮಾರಾಟ ಮತ್ತು ಸೇವಾ ಅಂಗಡಿಯಲ್ಲಿ ಆರು ವರ್ಷ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದು, 2025ರ ಆಗಸ್ಟ್ನಲ್ಲಿ ಲಾಭದಲ್ಲಿ ಪಾಲು ನೀಡುವ ಭರವಸೆಯ ಮೇರೆಗೆ 2.50 ಲಕ್ಷ ಹೂಡಿಕೆ ಮಾಡಿದ್ದೆ ಎಂದರು.
ಹೂಡಿಕೆ ಹಣ ವಾಪಸ್ ಕೇಳಿದಾಗ ವಿಳಂಬ ಮಾಡಿದ್ದರಿಂದ ಭಿನ್ನಾಭಿಪ್ರಾಯ ಉಂಟಾಗಿ ಕೆಲಸ ತೊರೆದಿದ್ದೆ. ಬಳಿಕ ಹಣ ಮರುಪಾವತಿಸುವಂತೆ ಕೇಳಿದಾಗ ಹಲ್ಲೆಗೆ ಮುಂದಾಗಿದ್ದರು. ನಂತರ ಮೂರು ಕಂತುಗಳಲ್ಲಿ 2.45 ಲಕ್ಷ ರೂ. ಪಾವತಿಸಿದ್ದರು ಎಂದು ತಿಳಿಸಿದರು.
ಕೌಲ್ ಬಜಾರ್ನಲ್ಲಿ ಸ್ವಂತ ಎಸಿ ರಿಪೇರಿ ಅಂಗಡಿ ಆರಂಭಿಸಿದ ಬಳಿಕ ಗ್ರಾಹಕರು ತಮ್ಮನ್ನು ಸಂಪರ್ಕಿಸುತ್ತಿರುವುದಕ್ಕೆ ಅಸಮಾಧಾನಗೊಂಡ ಹಾಜಿ ಮಲಂಗ್, ದೂರವಾಣಿ ಮೂಲಕ ನಿಂದಿಸಿ ಅಂಗಡಿ ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದರು.
ಸ್ನೇಹಿತರು ಮಾತುಕತೆಗೆ ತೆರಳಿದ ಸಂದರ್ಭದಲ್ಲಿ ಹಾಜಿ ಮಲಂಗ್ ಅವರೇ ಮೇಜಿನ ಗಾಜಿನಿಂದ ಹೊಡೆದುಕೊಂಡು, ಬಳಿಕ ತಮ್ಮ ಹಾಗೂ ಸ್ನೇಹಿತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಸಿದ್ದಿಕಿ ಪ್ರತಿದೂರು ನೀಡಿದರು.
ತಾವು ಅಥವಾ ತಮ್ಮ ಸ್ನೇಹಿತರು ಹಾಜಿ ಮಲಂಗ್ ಅವರ ಮೇಲೆ ಹಲ್ಲೆ ನಡೆಸಿಲ್ಲ. ತಮ್ಮ ಹೇಳಿಕೆಗೆ ಪೂರಕ ದಾಖಲೆಗಳಿವೆ ಎಂದ ಅವರು, ವಿವಾದದ ಕುರಿತು ನಿರ್ಧಾರ ಕೈಗೊಳ್ಳುವ ಮುನ್ನ ಎರಡೂ ಕಡೆಯ ವಾದಗಳನ್ನು ಆಲಿಸುವಂತೆ ಗ್ರಾಹಕರಿಗೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತೌಸಿಫ್, ಮೆಹಬೂಬ್, ಪ್ರಕಾಶ್ ಮತ್ತು ಪವನ್ ಉಪಸ್ಥಿತರಿದ್ದರು.