ಕಾಗವಾಡ: ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗೈದು ಗೌರವಕ್ಕೆ ಪಾತ್ರರಾದ ಸಂಸ್ಥೆಯ ಅಧ್ಯಕ್ಷರಾದ ಜ್ಯೋತಿಕುಮಾರ ಪಾಟೀಲ ಅವರಿಗೆ ಕಾಗವಾಡ ತಾಲೂಕು ದೈಹಿಕ ಶಿಕ್ಷಕರ ಸಂಘ ಹಾಗೂ ಶಿಕ್ಷಕ ವೃಂದದ ವತಿಯಿಂದ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ಪ್ರತಿನಿಧಿಗಳು, ಜ್ಯೋತಿಕುಮಾರ ಪಾಟೀಲ ಅವರ ಶಿಕ್ಷಣ ಕ್ಷೇತ್ರದ ದೂರದೃಷ್ಟಿ, ನಿಷ್ಠೆ ಹಾಗೂ ಅವಿರತ ಪರಿಶ್ರಮದಿಂದ ಸಂಸ್ಥೆ ಮತ್ತಷ್ಟು ಪ್ರಗತಿ ಸಾಧಿಸುತ್ತಿದೆ. ಅವರ ಸಾಧನೆ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸುವುದರ ಜೊತೆಗೆ ಶಿಕ್ಷಕರು ಹಾಗೂ ಸಿಬ್ಬಂದಿಗೆ ಹೊಸ ಉತ್ಸಾಹ ಮತ್ತು ಪ್ರೇರಣೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವುದು ಹೆಮ್ಮೆಯ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಅವರ ಯಶಸ್ಸಿನ ಪಯಣ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಗವಾಡ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ. ಸಂತೋಷ್, ಜಿಲ್ಲಾ ಸಂಘದ ಉಪಾಧ್ಯಕ್ಷ ಎಂ.ಕೆ. ಕಾಂಬಳೆ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಸ್. ಪಾಟೀಲ, ಪ್ರವೀಣ ಕಲ್ಲೋಳಿ, ವಿನಾಯಕ ರಾಮದುರ್ಗ, ಅರವಿಂದ ಮುಜಾವರ, ಪಿ.ಎಸ್. ಕುಂಬಾರ ಹಾಗೂ ಸಂತೋಷ ಸನದಿ ಉಪಸ್ಥಿತರಿದ್ದರು.