ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿವೈ ವಿಜಯೇಂದ್ರ, ಪೊಲೀಸರ ನಿರ್ಲಕ್ಷ್ಯದಿಂದ ಗುತ್ತಿಗೆದಾರ ಸಚಿನ್ ಮೃತಪಟ್ಟಿದ್ದಾರೆ. ಸಚಿನ್ ನಾಪತ್ತೆಯಾಗಿದ್ದಾನೆಂದು ಸಹೋದರಿ ಠಾಣೆಗೆ ಹೋಗಿದ್ದರು. ಸಚಿನ್ ಉಳಿಸಿಕೊಡಿ ಎಂದು ಮನವಿ ಮಾಡಿದ್ದರೂ ನಿರ್ಲಕ್ಷಿಸಿದ್ದರು. ಸಚಿನ್ ಕುಟುಂಬಸ್ಥರ ಮನವಿಗೆ ಪೊಲೀಸರು ಸ್ಪಂದಿಸಿದ್ದರೆ ಉಳಿಸಬಹುದಿತ್ತು. ತನ್ನ ಸಹೋದರಿಯರ ಮಾನಕ್ಕಾಗಿ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸರಿಯಾಗಿ ತನಿಖೆ ಮಾಡಲಿ. ಸಚಿನ್ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಕುಟುಂಬ ಆಗ್ರಹಿಸುತ್ತಿದೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಬಿವೈ ವಿಜಯೇಂದ್ರ, ಸಚಿವ ಪ್ರಿಯಾಂಕ್ ಖರ್ಗೆ ಅವರ ದುಷ್ಟ ಕೂಟದ ಸದಸ್ಯರ ಕಿರುಕುಳ, ಬೆದರಿಕೆಗಳನ್ನು ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿರುವ ಅಮಾಯಕ ಗುತ್ತಿಗೆದಾರ ಸಚಿನ್ ಅವರ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಾಯಿತು. ಅಕ್ಷರಶಃ ಸಚಿನ್ ಸಾವಿನಿಂದ ದಿಗ್ಮೂಢ ಸ್ಥಿತಿಯಲ್ಲಿರುವ ಕುಟುಂಬದ ಸ್ಥಿತಿ ಮಾನವೀಯತೆ ಇರುವ ಎಂಥವರ ಅಂತಃಕರಣವನ್ನೂ ಕಲಕುತ್ತದೆ ಎಂದಿದ್ದಾರೆ.
ಅನಾಥ ಪ್ರಜ್ಞೆ ಎದುರಿಸುತ್ತಿರುವ ಮೃತರ ಆಶ್ರಯಿಸಿದ್ದ ಕುಟುಂಬ ಸದಸ್ಯರ ಹಾಗೂ ಬಂಧುಗಳ ಆಕ್ರಂದನದ ಶಾಪ ಕಾಂಗ್ರೆಸ್ ಸರ್ಕಾರವನ್ನು ತಟ್ಟದೇ ಬಿಡದು, ದುಷ್ಕರ್ಮಿಗಳ ಗುಂಪನ್ನು ಪೋಷಿಸುತ್ತಿರುವ ಪ್ರಿಯಾಂಕ್ ಖರ್ಗೆ ಇದರ ಫಲ ಅನುಭವಿಸಲೇಬೇಕು. ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ರಾಜ್ಯ ಬಿಜೆಪಿ ಹೋರಾಟ ಕೊನೆಯಾಗದು, ನೊಂದ ಸಚಿನ್ ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡಿದ್ದಾರೆ.