ಎಂ.ಕೆ. ಹುಬ್ಬಳ್ಳಿ: ರೈತರು ಬೆಳೆದ ಪ್ರತಿಯೊಂದು ಬೆಳೆಗೆ ನ್ಯಾಯಯುತ ಬೆಂಬಲ ಬೆಲೆ ದೊರೆಯಬೇಕು. ಕೃಷಿ ಕ್ಷೇತ್ರಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚಿನ ಅನುದಾನ ಮೀಸಲಿಡಬೇಕು. ಉಭಯ ಸರ್ಕಾರಗಳು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕು ಎಂದು ಬೈಲೂರು ನಿಷ್ಕಲ
ಮಂಟಪದ ನಿಜಗುಣಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ 'ಕೇನ್ ಕ್ಯಾರಿಯರ್ ಪೂಜೆ ಮತ್ತು ಕಬ್ಬು ನುರಿಸುವ
ಸಾಮರ್ಥ್ಯ ಹೆಚ್ಚಿಸುವ ಸಾಲುವಾಗಿ
ಮಿಲ್ ಅಡಿಗಲ್ಲು ಪೂಜಾ ಮತ್ತು ಕಾರ್ಖಾನೆ ಲಾಂಛನ ಅನಾವರಣ ಸಮಾರಂಭ
ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಕಾರ್ಖಾನೆಯಲ್ಲಿ ಪ್ರತಿವರ್ಷ ಹೊಸ ಯಂತ್ರೋಪಕರಣಗಳನ್ನು ಅಳವಡಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಸಂತಸದ ಸಂಗತಿ. ರಾಜಕಾರಣ ಶಾಶ್ವತವಲ್ಲ, ಜನಸೇವೆಯೇ ಶಾಶ್ವತವಾಗಿದ್ದು, ರೈತರು ಸುಖವಾಗಿದ್ದರೆ ಸಮಾಜದ ಎಲ್ಲ ವರ್ಗದವರೂ ಸುಖವಾಗಿರಲು ಸಾಧ್ಯ ಎಂದು ಹೇಳಿದರು
ಮಾನವನ ಅತಿಯಾಸೆಗೆ ಪ್ರಕೃತಿ ವಿನಾಶದ ಅಂಚಿಗೆ ತಲುಪಿದೆ. ಆದ್ದರಿಂದ ಮಾನವ ಸಂಕುಲ ಪರಿಸರ ಕುರಿತು ಜಾಗೃತವಾಗಬೇಕಿದೆ ಎಂದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಾರ್ಖಾನೆಯ ಹಳೆಯ ಬಾಯ್ಲರ್‌ಗಳನ್ನು ಬದಲಿಸಿ ಆಧುನಿಕ ತಂತ್ರಜ್ಞಾನ ಅಳವಡಿಸುವುದರಿಂದ ಇಂಧನ ವೆಚ್ಚದಲ್ಲಿ ಶೇ.20ರಷ್ಟು ಉಳಿತಾಯವಾಗುವ ಸಾಧ್ಯತೆಯಿದೆ. ಈ ಕಾರ್ಖಾನೆ ಈ ಭಾಗದ ರೈತರ ಸ್ವಾಭಿಮಾನದ ಸಂಕೇತವಾಗಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಬೇಕು. ಕಾರ್ಖಾನೆ ಕಬ್ಬು ನುರಿಸಲು ಪ್ರಾರಂಭಿಸಿದ ನಂತರ ಮಧ್ಯದಲ್ಲಿ ಕಾರ್ಖಾನೆ ಸ್ಥಗಿತವಾಗದಂತೆ ಕ್ರಮವಹಿಸಿ
ಎಂದು ಆಡಳಿತ ಮಂಡಳಿಗೆ ಸಲಹೆ ನೀಡಿದರು.
ಕಾರ್ಖಾನೆಯ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ರೈತರು ಮತ್ತು ಷೇರುದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ಕಾರ್ಖಾನೆಯ ಜವಾಬ್ದಾರಿ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಷೇರುದಾರರು, ಕಾರ್ಮಿಕರು ಹಾಗೂ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಲಾಗುತ್ತಿದೆ ಎಂದರು .
ಕಬ್ಬು ಕಟಾವು ಮತ್ತು ಸಾಗಣೆಗಾಗಿ 225 ಗ್ಯಾಂಗ್‌ಗಳನ್ನು ಕರೆತರಲು ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿದ್ದ ಲೆಕ್ಕಪರಿಶೋಧನಾ ಕಾರ್ಯ ಪೂರ್ಣಗೊಳಿಸಲಾಗಿದ್ದು, ಕಾರ್ಖಾನೆಗೆ ನಷ್ಟ ಉಂಟುಮಾಡಿದವರಿಂದ ಹಣ ವಸೂಲಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈಗಾಗಲೇ ಎರಡು ಮಿಲ್‌ಗಳಿದ್ದರೂ ಮತ್ತೊಂದು ಹೊಸ ಮಿಲ್ ಅಳವಡಿಸುತ್ತಿರುವುದು ಕಾರ್ಖಾನೆಯ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದಾಗಿದೆ. ಹೊಸ ಮಿಲ್ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಳ್ಳಲಿದೆ. ಪ್ರಸಕ್ತ ವರ್ಷ ಡಿಸ್ಲರಿ ಪ್ರಾರಂಭಿಸುವುದಿಲ್ಲ ಡಿಸ್ಲರಿ
ಘಟಕದಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಅದಕ್ಕೆ ಸುಮಾರು ಮೂರು ಕೋಟಿ ಖರ್ಚು, ಆಗುವುದರಿಂದ ಈ ವರ್ಷ ಅದನ್ನು ಪ್ರಾರಂಭಿಸುವುದು ಸಾಧ್ಯವಾಗುವುದಿಲ್ಲ.
ಈ ಹಿಂದೆ ಕಾರ್ಖಾನೆಯಲ್ಲಿ ನಡೆದ ಅವ್ಯವಾರಗಳ ತನಿಖೆಯನ್ನು ಈಗಾಗಲೇ ಮಾಡಲಾಗಿದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಕೇಸ್ ದಾಖಲಿಸಿ ಕಾರ್ಖಾನೆಗೆ ಹಾನಿ ಆದದ್ದನ್ನು ಮರುಪಾವತಿ ಮಾಡಲು ಎಲ್ಲ ರೀತಿಯಾದಂತ ಕ್ರಮ ಕೈಗೊಳ್ಳುತ್ತಿದ್ದೇವೆ.
ರೈತರು ಕಬ್ಬಿನ ದರ ಹೆಚ್ಚಳ ಮಾಡುವಂತೆ ಒತ್ತಾಯಿಸಿ ರಾಜ್ಯದಲ್ಲಿ ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಅದಕ್ಕಾಗಿ ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದು ರಾಜ್ಯದಲ್ಲಿ ಈಗ ನಡೆಯುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಕ್ರಮ ಕೈಗೊಳ್ಳಲು ಸಭೆ ಕರೆಯಬೇಕೆಂದು ಹಟ್ಟಿಹೊಳಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ 2017-18ನೇ ಸಾಲಿನ ಕಬ್ಬಿನ ಬಾಕಿ ಬಿಲ್ ಪಾವತಿಸುವಂತೆ ಕೆಲ ರೈತರು ಒತ್ತಾಯಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಖಾನೆಯ
ವ್ಯವಸ್ಥಾಪಕ ನಿರ್ದೇಶಕ ಶಶಿಕಾಂತ ಪಾಟೀಲ, ಪ್ರಸಕ್ತ ಹಂಗಾಮಿನಲ್ಲಿ 4 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ರೈತರಿಗೆ ನಿಗದಿತ ಸಮಯದಲ್ಲಿ ಕಬ್ಬಿನ ಬಿಲ್ ಪಾವತಿಸುವುದರ ಜತೆಗೆ ಸರ್ಕಾರ ನಿಗದಿಪಡಿಸುವ ಬೆಲೆಯನ್ನ ನೀಡಲಾಗುವುದು. ಈ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಕಾರ್ಖಾನೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾದರವಳ್ಳಿ ಸೀಮಿಮಠದ ಪಾಲಾಕ್ಷ ಶ್ರೀಗಳು ಮಾತನಾಡಿ, ಕಾರ್ಖಾನೆಯು ಹಲವು ವರ್ಷಗಳಿಂದ ಅಭಿವೃದ್ಧಿಯ ನಿರೀಕ್ಷೆಯಲ್ಲಿತ್ತು. ಇದೀಗ ಅಭಿವೃದ್ಧಿ ಕಾರ್ಯಗಳು ಕಾರ್ಯರೂಪಕ್ಕೆ ಬರುತ್ತಿರುವುದು ಸಂತಸದ ಸಂಗತಿ. ಕಾರ್ಖಾನೆಯ ಪ್ರಗತಿಗೆ ರೈತರು, ಆಡಳಿತ ಮಂಡಳಿ ಹಾಗೂ ಕಾರ್ಮಿಕರು ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಅಭಿವೃದ್ಧಿ, ರೈತರ ಹಿತಾಸಕ್ತಿ ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ಆದ್ಯತೆ ನೀಡುವ ಸಂಕಲ್ಪ ವ್ಯಕ್ತವಾಯಿತು. ಪ್ರಸಕ್ತ ಹಂಗಾಮಿನಲ್ಲಿ 4 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹಾಗೂ ರೈತರಿಗೆ ಸಕಾಲದಲ್ಲಿ ಬಿಲ್ ಪಾವತಿಸುವ ಭರವಸೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ವಿವಿಧ ಮಠಾಧೀಶರ ಅಮೃತ ಹಸ್ತದಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಪೂಜಾ ಕಾರ್ಯಕ್ರಮಗಳು ಹಾಗೂ ನೂತನ ಲಾಂಛನ ಅನಾವರಣ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಮುಂಬರುವ ಕಬ್ಬು ನುರಿಸುವ ಹಂಗಾಮಿಗೆ ಸಿದ್ಧತೆಗಳ ಭಾಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕಿತ್ತೂರು ಶ್ರೀ ರಾಜ ಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜ ಯೋಗೇಂದ್ರ ಮಹಾಸ್ವಾಮಿಗಳು ಅರಳಿ ಕಟ್ಟಿ ತೋಟದಾರ್ಯ ವಿರಕ್ತಮಠದ ಶಿವಮೂರ್ತಿ ಮಹಾಸ್ವಾಮಿಗಳು, ದತ್ತವಾಡ ಬಾಬಾ ಮಹಾರಾಜರ ಆಶ್ರಮದ ಹೃಷಿಕೇಶಾನಂದ ಬಾಬಾ ಮಹಾರಾಜರು
ರೈತರು, ರೈತ ಮುಖಂಡರು, ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿವೇಕ್ ಕುರುಗುಂದ ನಿರೂಪಣೆ, ಸುರೇಶ್ ಗಣಾಚಾರಿ ವಂದಿಸಿದರು.