ಬೆಂಗಳೂರು.02: ಸಮಾಜಸೇವೆ ಹಾಗೂ ಕಲಾ ಕ್ಷೇತ್ರದ ನಿಸ್ವಾರ್ಥ ಸಾಧನೆಯನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿತ ‘ಭಾರತರತ್ನ ಮದರ್ ತೆರೇಸಾ ಅವಾರ್ಡ್ – 2026’ ಪ್ರಶಸ್ತಿಗೆ ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆಯ ಅಧ್ಯಕ್ಷರಾದ ಅನುರಾಧ ವಾಲ್ಮೀಕಿ ಅವರು ಭಾಜನರಾಗಿದ್ದಾರೆ.
ನಿನ್ನೆ ಗುರುವಾರದಂದು ಬೆಂಗಳೂರಿನ ಯಲಹಂಕದಲ್ಲಿ ಟಿವಿ 4 ಕನ್ನಡ ನ್ಯೂಸ್ ಚಾನೆಲ್ ಹಾಗೂ ಶ್ರೀ ಶಿರಡಿ ಸಾಯಿ ದೀಪ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಟಿವಿ 4 ಕನ್ನಡ ನ್ಯೂಸ್ ಚಾನೆಲ್ನ ಸಂಸ್ಥಾಪಕರಾದ ಡಾ. ಸಾಯಿ ಸತೀಶ್ ತೋಟಯ್ಯ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಯೋಜಾತಶಾಸ್ತ್ರಿ ಹಿರೇಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಟಿವಿ 4 ಕನ್ನಡ ನ್ಯೂಸ್ ಚಾನೆಲ್ ಮುಖ್ಯಸ್ಥರಾದ ಡಾ. ಸಾಯಿ ಸತೀಶ್ ಮಾತನಾಡಿ,
ಕಲೆ ಹಾಗೂ ಸಮಾಜಸೇವೆಯ ಅನನ್ಯ ಸೇತುವೆ
ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆಯ ಮುಖಾಂತರ ಮಹಿಳಾ ಸಬಲೀಕರಣ, ಜಾನಪದ ಹಾಗೂ ಸಾಂಸ್ಕೃತಿಕ ಪರಂಪರೆಯ ಉಳಿವಿಗೆ ಅನುರಾಧ ವಾಲ್ಮೀಕಿ ಅವರು ಸುದೀರ್ಘ ಕಾಲದಿಂದ ಶ್ರಮಿಸುತ್ತಿದ್ದಾರೆ. ಗ್ರಾಮೀಣ ಹಾಗೂ ಹಿಂದುಳಿದ ವರ್ಗಗಳ ಮಹಿಳಾ ಕಲಾವಿದರಿಗೆ ವೇದಿಕೆ ಒದಗಿಸುವುದು, ಸಾಂಸ್ಕೃತಿಕ ತರಬೇತಿ ನೀಡುವುದು ಮತ್ತು ಅವರ ಸ್ವಾವಲಂಬನೆಗೆ ನೆರವಾಗುವ ಹಲವು ಕಾರ್ಯಕ್ರಮಗಳನ್ನು ಸಂಸ್ಥೆಯು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಅವರ ನಿಸ್ವಾರ್ಥ ಸಮಾಜಮುಖಿ ಕಳಕಳಿ ಹಾಗೂ ಕಲಾ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟರು .
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅನುರಾಧ ವಾಲ್ಮೀಕಿ ಅವರು, "ಮದರ್ ತೆರೇಸಾ ಅವರ ಹೆಸರಿನ ಈ ಪವಿತ್ರ ಪ್ರಶಸ್ತಿ ಲಭಿಸಿರುವುದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಗೌರವವು ನನ್ನೊಬ್ಬಳದಲ್ಲ; ನನ್ನ ಸಂಸ್ಥೆಯ ಪ್ರತಿಯೊಬ್ಬ ಕಲಾವಿದೆ ಹಾಗೂ ಬೆನ್ನೆಲುಬಾಗಿ ನಿಂತ ಸಮಾಜದ ಪ್ರತಿಯೊಬ್ಬರಿಗೂ ಸಲ್ಲುತ್ತದೆ. ಮುಂದಿನ ದಿನಗಳಲ್ಲಿ ಮಹಿಳೆಯರ ಸಬಲೀಕರಣ ಹಾಗೂ ಕಲಾ ಪ್ರಸಾರಕ್ಕೆ ಇನ್ನಷ್ಟು ಶ್ರಮಿಸುತ್ತೇನೆ," ಎಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮದಲ್ಲಿ ರಾಜ್ಯದ ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ ಹಾಗೂ ಮಾಧ್ಯಮ ರಂಗದ ಹಲವು ಗಣ್ಯರು, ಸಂಘಟನೆಯ ಪದಾಧಿಕಾರಿಗಳು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೆಳೆದವು.