ಕಾಂಗ್ರೆಸ್ ನಿಮ್ಮ ಆಸ್ತಿಪಾಸ್ತಿ ಕಬಳಿಸ್ತಾರೆ ಹುಷಾರ್ ಎಂದು ಗುಡುಗಿದ ಮೋದಿ

Ravi Talawar
ಕಾಂಗ್ರೆಸ್ ನಿಮ್ಮ ಆಸ್ತಿಪಾಸ್ತಿ ಕಬಳಿಸ್ತಾರೆ ಹುಷಾರ್ ಎಂದು ಗುಡುಗಿದ ಮೋದಿ
WhatsApp Group Join Now
Telegram Group Join Now

ನವದೆಹಲಿ, ಏಪ್ರಿಲ್ 22: ಚುನಾವಣಾ ಪ್ರಣಾಳಿಕೆಯಲ್ಲಿ  ಕಾಂಗ್ರೆಸ್ ಪಕ್ಷ ನೀಡಿದ್ದ ಸಂಪತ್ತು ಮರುಹಂಚಿಕೆಯ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗುಡುಗಿದ್ದಾರೆ. ಉತ್ತರಪ್ರದೇಶದ ಆಲಿಗಡ್​ನಲ್ಲಿ ಇಂದು ಸೋಮವಾರ ಚುನಾವಣಾ ಪ್ರಚಾರ ನಡೆಸಿದ ಮೋದಿ, ಈ ಜನರಿಗೆ ಮಹಿಳೆಯರ ಮಂಗಳಸೂತ್ರದ ಮೇಲೂ ಕಣ್ಣು ಬಿದ್ದಿದೆ. ಮಾತೆಯರು, ಭಗಿನಿಯರ ಚಿನ್ನವನ್ನು ದೋಚುವ ದುರುದ್ದೇಶ ಇವರದ್ದು ಎಂದು ಪ್ರಧಾನಿಗಳು ಗುಡುಗಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಕ್ಕರೆ, ಈ ದೇಶದಲ್ಲಿ ಯಾರು ಎಷ್ಟು ಆಸ್ತಿ ಹೊಂದಿದ್ದಾರೆ ಎಂದು ಹಣಕಾಸು ಮತ್ತು ಸಾಂಸ್ಥಿಕ ಸಮೀಕ್ಷೆ ಕೈಗೊಳ್ಳಲಾಗುವುದು. ಬಳಿಕ ಈ ಆಸ್ತಿಯನ್ನು ಮರು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಹುಲ್ ಗಾಂಧಿ ತಮ್ಮ ಚುನಾವಣಾ ಪ್ರಣಾಳಿಕಯ ಒಂದು ಅಂಶದ ಬಗ್ಗೆ ವಿವರಣೆ ನೀಡಿದ್ದರು. ಇದರ ಬಗ್ಗೆ ನರೇಂದ್ರ ಮೋದಿ ಮಾತನಾಡಿದ್ದಾರೆ.

‘ಅವರ ಸರ್ಕಾರ ಅಧಿಕಾರಕ್ಕೆ ಬಂದರೆ, ನಿಮ್ಮಲ್ಲಿ ಎಷ್ಟು ಆಸ್ತಿ ಇದೆ, ಎಷ್ಟು ಮನೆಗಳಿವೆ ಎಂದು ವಿಚಾರಿಸುವುದಾಗಿ ಕಾಂಗ್ರೆಸ್​ನ ರಾಜಕುಮಾರ ಹೇಳುತ್ತಾರೆ. ನಿಮ್ಮಲ್ಲಿ ಪೂರ್ವಿಕರಿಂದ ಬಂದ ಮನೆ ಮತ್ತು ನಗರದಲ್ಲಿ ಒಂದು ಫ್ಲಾಟ್ ಇದ್ದರೆ ಅವೆರೆಡರಲ್ಲಿ ಒಂದನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುತ್ತದೆ. ಇದು ಮಾವೋವಾದಿ ಕಮ್ಯೂನಿಸ್ಟರ ಚಿಂತನೆ. ಇದನ್ನು ಭಾರತದಲ್ಲಿ ಜಾರಿಗೊಳಿಸಲು ಹೊರಟಿದ್ದಾರೆ,’ ಎಂದು ನರೇಂದ್ರ ಮೋದಿ ಟೀಕಿಸಿದ್ದಾರೆ.

ವಂಶಾಡಳಿತದವರು ಈ ದೇಶದ ಜನಸಾಮಾನ್ಯರನ್ನು ಲೂಟಿ ಮಾಡಿ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಅವರ ಆಸ್ತಿಯಿಂದ ಜನರಿಗೆ ಕೊಟ್ಟಿರುವುದು ಏನೂ ಇಲ್ಲ. ದೇಶವಾಸಿಗಳನ್ನು ಲೂಟಿ ಮಾಡುವುದೇ ತಮ್ಮ ಜನ್ಮಸಿದ್ಧ ಹಕ್ಕು ಎಂದು ಅವರು ಭಾವಿಸಿದ್ದಾರೆ,’ ಎಂದು ಪ್ರಧಾನಿಗಳು ತಿಳಿಸಿದ್ದಾರೆ.

ನಿನ್ನೆ ಕೂಡ ಮೋದಿ ಅವರು ರಾಜಸ್ಥಾನದಲ್ಲಿ ಮಾತನಾಡುವಾಗ ಈ ವಿಚಾರವನ್ನು ಪ್ರಸ್ತಾಪಿಸಿ ಕುಟುಕಿದ್ದರು. ಈ ದೇಶದ ಸಂಪನ್ಮೂಲದ ಮೊದಲ ಹಕ್ಕು ಅಲ್ಪಸಂಖ್ಯಾತರಿಗೆ ಇರುತ್ತದೆ ಎಂದು ಮಾಜಿ ಪಿಎಂ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ವಿರೋಧಿಸಿದ ಪ್ರಧಾನಿಗಳು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಳಸೂತ್ರ ಕಿತ್ತು ನುಸುಳುಕೋರರಿಗೆ ಕೊಡುತ್ತಾರೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಹೆಸರು ಹೇಳಿ ವೋಟ್ ಪಡೆಯುತ್ತದೆ ವಿನಃ ಅವರ ಅಭಿವೃದ್ಧಿ ಆಗಬೇಕಿಲ್ಲ. ದಲಿತ ಮುಸ್ಲಿಮರ ಕಷ್ಟಗಳ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಯಿಂದಾಗಿ ಮುಸ್ಲಿಮರು ಇವತ್ತು ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ ನರೇಂದ್ರ ಮೋದಿ, ತಮ್ಮ ಸರ್ಕಾರ ತ್ರಿವಳಿ ತಲಾಖ್ ರದ್ದು ಮಾಡಿದ್ದು, ಹಜ್ ಯಾತ್ರೆಯ ಭಾರತದ ಕೋಟಾ ಹೆಚ್ಚಿಸಿದ್ದು, ಹೀಗೆ ಹಲವು ಕ್ರಮಗಳನ್ನು ಪಟ್ಟಿ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article