ಹೆದ್ದಾರಿ ಟೋಲ್ ದರ ಶೇ.14ರಷ್ಟು ಏರಿಕೆ: ಏಪ್ರಿಲ್ 1ರಿಂದ ಜಾರಿಗೆ

Ravi Talawar
ಹೆದ್ದಾರಿ ಟೋಲ್ ದರ ಶೇ.14ರಷ್ಟು ಏರಿಕೆ: ಏಪ್ರಿಲ್ 1ರಿಂದ ಜಾರಿಗೆ
WhatsApp Group Join Now
Telegram Group Join Now

ಬೆಂಗಳೂರು,ಮಾ.29: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳ ಟೋಲ್‌ ಅನ್ನು ಏಪ್ರಿಲ್‌ 1ರಿಂದ ಏರಿಕೆ ಮಾಡಲಿದೆ. ಅದೂ ಶೇ. 3ರಿಂದ ಶೇ.14ರವರೆಗೆ ಟೋಲ್‌ ದರಗಳು ಹೆಚ್ಚಳವಾಗಲಿವೆ.

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ, ಬೆಂಗಳೂರು ಹೈದ್ರಾಬಾದ್‌, ಹೊಸಕೋಟೆ-ದೇವನಹಳ್ಳಿ ವಲಯದ ಬೆಂಗಳೂರು ಸೆಟಲೈಟ್‌ ರಿಂಗ್‌ ರಸ್ತೆಯ( STRR) ಟೋಲ್‌ ಶುಲ್ಕದಲ್ಲಿ ಏರಿಕೆಯಾಗಲಿದೆ.

ಆರು ತಿಂಗಳ ಹಿಂದೆಯಷ್ಟೇ ಕೆಲವು ಟೋಲ್‌ಗಳ ಏರಿಕೆಯಾಗಿತ್ತು. ಈಗ ವಾರ್ಷಿಕ ಏರಿಕೆಯಂತೆ ಏಪ್ರಿಲ್‌ 1ರಿಂದ ಹೆಚ್ಚಾಗಲಿದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೋಲ್‌ಸೇನ್‌ ಪ್ರೈಸ್‌ ಇಂಡೆಕ್ಸ್‌ನಂತೆ ಹೊಸ ದರಗಳು ಜಾರಿಯಾಗುತ್ತಿವೆ. ಈಗಿರುವ ದರವನ್ನು ಅಲ್ಪ ಪ್ರಮಾಣದಲ್ಲಿ ಏರಿಸಲಾಗಿದ್ದು, ಇದು ಮುಂದಿನ ವರ್ಷ 2025ರ ಮಾರ್ಚ್‌ 31ರವರೆಗೆ ಈ ದರ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.

ಬೆಂಗಳೂರು ಹಾಗೂ ಮೈಸೂರು ನಡುವಿನ ಎಕ್ಸ್‌ ಪ್ರೆಸ್‌ ವೇ ಹಾಗೂ ಬೆಂಗಳೂರು ಹೈದ್ರಾಬಾದ್‌ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಟೋಲ್‌ ಗಳಲ್ಲಿ ಶೇ. 3ಹಾಗೂ ಸೆಟಲೈಟ್‌ ರಿಂಗ್‌ ರಸ್ತೆ ಬಳಸುವ ಮಾರ್ಗಕ್ಕೆ ಶೇ. 14ರಷ್ಟು ದರ ಏರಿಕೆಯಾಗಲಿದೆ. ಅದರಲ್ಲೂ ದೊಡ್ಡಬಳ್ಳಾಪುರ- ಹೊಸಕೋಟೆ ಮಾರ್ಗದ ಸೆಟಲೈಟ್‌ ರಿಂಗ್‌ ರಸ್ತೆ ಟೋಲ್‌ ದರ ಆರೇ ತಿಂಗಳಲ್ಲಿ ಎರಡನೇ ಬಾರಿಗೆ ಹೆಚ್ಚಳವಾಗುತ್ತಿದೆ ಎಂದು ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್‌ ಬ್ರಹ್ಮಣನಕರ್‌ ಮಾಹಿತಿ ನೀಡಿದ್ದಾರೆ.

ಹೊಸ ದರದ ಪ್ರಕಾರಣ ಬೆಂಗಳೂರು ನಿಡಘಟ್ಟ ನಡುವಿನ 55.63 ಕಿ. ಮಿ ಮಾರ್ಗಕ್ಕೆ ಕಾರು, ಜೀಪ್‌ ಹಾಗೂ ವ್ಯಾನ್‌ ಗಳಿಗೆ ಒಂದು ಮಾರ್ಗಕ್ಕೆ 170 ರೂ. ಅದೇ ಮಾರ್ಗದಲ್ಲಿ 24 ಗಂಟೆ ಒಳಗೆ ವಾಪಾಸಾದರೆ 255 ರೂ. ಪಾವತಿಸಬೇಕಾಗುತ್ತದೆ. ಈಗ ಇರುವ ದರದಲ್ಲಿ 5 ರೂ. ಏರಿಕೆ ಕಾಣಲಿದೆ. ಇದೇ ಮಾರ್ಗಕ್ಕೆ ಲಘು ವಾಣಿಜ್ಯ ವಾಹನ, ಗೂಡ್ಸ್‌ ಹಾಗೂ ಮಿನಿ ಬಸ್‌ಗೆ 275 ರೂ, 24 ಗಂಟೆ ಒಳಗೆ ವಾಪಾಸಾದರೆ 415 ರೂ. ಪಾವತಿಸಬೇಕಾಗುತ್ತದೆ. ಟ್ರಕ್‌, ಬಸ್‌ಗಳಿಗೆ ಒಂದು ಕಡೆ ಸಂಚಾರಕ್ಕೆ 580ರೂ ಹಾಗೂ 24 ಗಂಟೆ ಒಳಗೆ ವಾಪಾಸಾದರೆ 870 ರೂ. ಪಾವತಿಬೇಕು. ಇದಲ್ಲದೇ ಮಾಸಿಕ ದರದಲ್ಲೂ ಕೊಂಚ ಏರಿಕೆ ಅಂದರೆ 340 ರೂ. ನಿಗದಿ ಮಾಡಲಾಗಿದೆ. ಕಣಮಿಣಿಕೆ ಹಾಗೂ ಶೇಷಗಿರಿಹಳ್ಳಿಯಲ್ಲಿ ಟೋಲ್‌ ಸಂಗ್ರಹ ಕೇಂದ್ರಗಳಿವೆ.

ಅದೇ ರೀತಿ ನಿಡಘಟ್ಟದಿಂದ ಮೈಸೂರುವರೆಗಿನ ಮಾರ್ಗಕ್ಕೆ ಕಾರು, ವ್ಯಾನ್‌ ಜೀಪ್‌ಗಳಿಗೆ ಒಂದು ಮಾರ್ಗದ ಸಂಚಾರಕ್ಕೆ 160 ರೂ. 24 ಗಂಟೆ ಒಳಗೆ ವಾಪಾಸಾದರೆ 240 ರೂ. ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಇಲ್ಲಿಯೂ 5 ರೂ.ಗಳಷ್ಟು ದರ ಹೆಚ್ಚಳವಾಗಲಿದೆ.

ದೊಡ್ಡಬಳ್ಳಾಪುರ ಬೈಪಾಸ್‌ನಿಂದ ಹೊಸಕೋಟೆವರೆಗಿನ ಟೋಲ್‌ ಶುಲ್ಕ ಕಾರು, ಜೀಪು, ವ್ಯಾನ್‌ಗೆ ಒಂದು ಮಾರ್ಗಕ್ಕೆ 80 ರೂ. ಹಾಗೂ ಎರಡೂ ಕಡೆ ಸಂಚಾರಕ್ಕೆ 120 ರೂ. ಇರಲಿದೆ. ಮಾಸಿಕ 2,720 ರೂ. ಗಳಿಗೆ ನಿಗದಿಪಡಿಸಲಾಗಿದೆ. ಲಘು ವಾಣಿಜ್ಯ ವಾಹನಗಳು. ಮಿನಿ ಬಸ್‌ಗಳಿಗೆ 130 ರೂ. ವಾಪಾಸ್‌ ಬರುವುದೂ ಸೇರಿ 200 ರೂ. ಆಗಲಿದೆ. ಮಾಸಿಕ 4,395 ರೂ.ಗೆ ಹೆಚ್ಚಿಸಲಾಗಿದೆ. ಟ್ರಕ್‌ ಹಾಗೂ ಬಸ್‌ಗಳಿಗೆ ಒಂದು ಬದಿಗೆ 275 ರೂ, ಎರಡೂ ಕಡೆ ಸಂಚಾರಕ್ಕೆ 415 ರೂ. ಹಾಗೂ ಮಾಸಿಕ 9,205 ರೂ. ಗೆ ಏರಿಸಲಾಗಿದೆ. ನಲ್ಲೂರು ಹಾಊ ದೇವನಹಳ್ಳಿಯಲ್ಲಿ ಟೋಲ್‌ಗಳು ಬರಲಿವೆ.

ಇನ್ನು ರಾಷ್ಟ್ರೀಯ ಹೆದ್ದಾರಿ 7ರ ಟೋಲ್‌ ಅನ್ನು ಕಾರು, ಜೀಪು, ಲಘು ವಾಹನಕ್ಕೆ ಒಂದು ಬದಿ ಸಂಚಾರಕ್ಕೆ 115 ರೂ. ಹಾಗೂ ಎರಡು ಕಡೆ ಸಂಚಾರಕ್ಕೆ 175 ರೂ, ನಿಗದಿಮಾಡಲಾಗಿದೆ. ಬಾಗೇಪಲ್ಲಿ ಶುಲ್ಕ ಸಂಗ್ರಹ ಘಟಕವಿದೆ.

 

WhatsApp Group Join Now
Telegram Group Join Now
Share This Article