ರಾಜಸ್ಥಾನ, ಮಾ. 17: ಅಂಗಡಿ ಮುಂಗಟ್ಟು, ಮನೆಗಳಿಗೆ ನುಗ್ಗಿ ಕಳ್ಳತನ (theft) ಮಾಡುವವರು ಒಂದು ಕಡೆಯಾದ್ರೆ, ಒಂದಷ್ಟು ಖದೀಮರು ಎಟಿಎಂ (ATM) ಹಾಗೂ ಬ್ಯಾಂಕ್‌ಗಳಿಗೆಯೇ (Bank) ನುಗ್ಗಿ ದೊಡ್ಡ ಮೊತ್ತದ ಹಣ, ಲಾಕರ್‌ನಲ್ಲಿದ್ದ ಚಿನ್ನವನ್ನು ದರೋಡೆ (Robbery) ಮಾಡುತ್ತಾರೆ. ಇಂತಹ ಬ್ಯಾಂಕ್ ದರೋಡೆಗಳಿಗೆ ಸಂಬಂಧಿಸಿದ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ದರೋಡೆಕೋರರು ಸಿನಿಮೀಯ ಶೈಲಿಯಲ್ಲಿ ಎಟಿಎಂನಲ್ಲಿದ್ದ ನಗದು ಹಣವನ್ನು ದೋಚಿದ್ದಾರೆ. ಹೌದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್‌ಗೆ ಸೇರಿದ ಎಟಿಎಂ ಗೆ ನುಗ್ಗಿ ಮೊದಲು ಅಲ್ಲಿದ್ದ ಸಿಸಿ ಕ್ಯಾಮೆರಾಗಳಿಗೆ ಸ್ಪ್ರೇ ಹೊಡೆದು ಬಳಿಕ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರ ಕತ್ತರಿಸಿ ಹಣ ದೋಚಿ ಪರಾರಿಯಾಗಿದ್ದಾರೆ. ಕಳ್ಳತನಕ್ಕೂ ಮುಂಚಿನ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂಗಡಿ, ಮನೆಗಳಿಗೆ ನುಗ್ಗಿ ಕಳುವು; ಖದೀಮರು ಎಸ್ಕೇಪ್

ಈ ಘಟನೆ ರಾಜಸ್ಥಾನದ ಜುಂಝುನು ಎಂಬಲ್ಲಿ ನಡೆದಿದ್ದು, ಇಲ್ಲಿನ ಎಟಿಎಂ ಒಂದಕ್ಕೆ ನುಗ್ಗಿದ ದರೋಡೆಕೋರರು ಹಣ ದೋಚಿ ಪರಾರಿಯಾಗಿದ್ದಾರೆ. ಶನಿವಾರ (ಮಾ. 15) ಬೆಳಗಿನ ಜಾವ 3.11 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗೆ ಸೇರಿದ ಎಟಿಎಂಗೆ ನುಗ್ಗಿದ ಕಳ್ಳರು ಮೊದಲಿಗೆ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳಿಗೆ ಸ್ಪ್ರೇ ಹೊಡೆದು ನಂತರ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರ ಕತ್ತರಿಸಿದ ಅದರಲ್ಲಿದ್ದ ಬರೋಬ್ಬರಿ 38 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಎಟಿಎಂ ಯಂತ್ರ ಕತ್ತರಿಸುವಾಗ ಅದರೊಳಗಿದ್ದ 100 ರೂ. ನೋಟಿನ ಬಂಟಲ್ಗಳು ಸುಟ್ಟು ಹೋಗಿದ್ದು, ಕಳ್ಳರು ಅದನ್ನು ಅಲ್ಲೇ ಬಿಟ್ಟು ಇನ್ನುಳಿದ ಹಣವನ್ನು ದೋಚಿದ್ದಾರೆ.