ಬೆಂಗಳೂರು, ಮೇ 06: ಚಾಕೊಲೇಟ, ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್ ಮಕ್ಕಳಿಗೆ ಬಲು ಇಷ್ಟ. ಒಂದು ಪಕ್ಷ ಮಕ್ಕಳು ಊಟ ಬೇಕಾದರೂ ಬಿಡುತ್ತಾರೆ, ಇವುಗಳನ್ನು ತಿನ್ನುವುದು ಮಾತ್ರ ಬಿಡುವುದಿಲ್ಲ. ಆದರೆ ಇವುಗಳನ್ನು ಮಕ್ಕಳಿಗೆ ನೀಡುವುದಕ್ಕೂ ಮುಂಚೆ ಆಹಾರ ಇಲಾಖೆ ಪೋಷಕರಿಗೆ ಎಚ್ಚರಿಕೆ ನೀಡಿದೆ. ಚಾಕೊಲೇಟ್, ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್ಗಳಲ್ಲಿ ಕೃತಕ ಕಲರ್ ಹಾಗೂ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದ್ದು, ಟೆಸ್ಟ್ ಮಾಡಲು ಮುಂದಾಗಿದೆ.
ಮಕ್ಕಳ ಅಚ್ಚುಮೆಚ್ಚಿನ ಚಾಕೊಲೇಟ್, ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್ಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದೆ. ಇವುಗಳ ಸೇವನೆಯಿಂದ ಕ್ಯಾನ್ಸರ್ ಸಹಿತ ಅಪಾಯಕಾರಿ ಕಾಯಿಲೆಗಳಿಗೆ ದಾರಿ ಮಾಡಿಕೊಡುವುದಲ್ಲದೇ, ಮಕ್ಕಳ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಎಫ್ಎಸ್ಎಸ್ಎಐ ಸೂಚನೆ ಬೆನ್ನಲೆ ರಾಜ್ಯದಲ್ಲಿ ಆಹಾರ ಇಲಾಖೆ ಅಲರ್ಟ್ ಆಗಿದ್ದು, ಸ್ಯಾಂಪಲ್ಸ್ ಪಡೆದು ಆಹಾರ ಇಲಾಖೆಯ ಲ್ಯಾಬ್ಗಳಲ್ಲಿ ಟೆಸ್ಟ್ಗೆ ಒಳಪಡಿಸಲು ಮುಂದಾಗಿದೆ.
ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್ಗಳಲ್ಲಿ ಕೃತಕ ಕಲರ್ ಬಳಕೆ ಮಾಡುತ್ತಿದ್ದು, ತಯಾರಿಕಾ ಘಟಕಗಳಲ್ಲಿ ಸ್ವಚ್ಛತೆ ಇರಲ್ಲ ಎನ್ನಲಾಗುತ್ತಿದೆ. ಚಾಕೊಲೇಟ್ಗಳ ತಯಾರಿಕೆಯಲ್ಲಿ ಕೆಲವು ರಾಸಾಯನಿಕಗಳ ಬಳಕೆ ಬಗ್ಗೆ ಕೂಡ ದೂರುಗಳು ಬಂದಿವೆ. ಹೀಗಾಗಿ ಆಹಾರ ಇಲಾಖೆ ರಾಜ್ಯದಲ್ಲಿ ಸ್ಯಾಂಪಲ್ಸ್ ಪಡೆಯಲು ಮುಂದಾಗಿದೆ. ಅಷ್ಟೇ ಅಲ್ಲದೆ ವಿದೇಶದಿಂದ ಆಮದು ಆಗುವ ಪದಾರ್ಥಗಳನ್ನು ಟೆಸ್ಟ್ ಮಾಡಲು ಮುಂದಾಗಿದ್ದು, ಅಸುರಕ್ಷಿತ ಪದಾರ್ಥಗಳ ಮೇಲೂ ಕ್ರಮಕ್ಕೆ ಆಹಾರ ಇಲಾಖೆ ಪ್ಲಾನ್ ಮಾಡಿದೆ.