ಬೆಂಗಳೂರು, ಬಳ್ಳಾರಿ, ಮಾರ್ಚ್ 4: ಮನೆಮುಂದೆಯೇ ಕೋಳಿಗಳು ಸತ್ತು ಬೀಳುತ್ತಿವೆ. ಫಾರಂಗಳಲ್ಲಿ ಮಾರಣಹೋಮವೇ ನಡೆಯುತ್ತಿದೆ. ದಿನಕ್ಕೊಂದು ಜಿಲ್ಲೆ, ದಿನಕ್ಕೊಂದು ಊರು ಎಂದು ರಾಜ್ಯದಲ್ಲಿ ಹಕ್ಕಿಜ್ವರ ವ್ಯಾಪಿಸುತ್ತಲೇ ಇದ್ದು, ಬಳ್ಳಾರಿಯಲ್ಲಿ ಹಕ್ಕಿಜ್ವರ ಅಬ್ಬರಕ್ಕೆ ಇಡೀ ಕೋಳಿ ಫಾರಂಗಳೇ ಖಾಲಿ ಆಗುತ್ತಿವೆ. ಜಿಲ್ಲೆಯಲ್ಲಿ ಸುಮಾರು 17 ಸಾವಿರ ಕೋಳಿಗಳ ಹತ್ಯೆ ಮಾಡಲಾಗಿದೆ.
ಆಂಧ್ರ, ತೆಲಂಗಾಣದಲ್ಲಿ ಅಬ್ಬರಿಸುತ್ತಿದ್ದ ಹಕ್ಕಿಜ್ವರ ಕರ್ನಾಟಕಕ್ಕೂ ಕಾಲಿಟ್ಟಿದೆ. ಅದರಲ್ಲೂ ಬಳ್ಳಾರಿಯಲ್ಲಿ ಕೋಳಿಗಳ ಮಾರಣಹೋಮವೇ ನಡೆದಿದೆ. ಹಕ್ಕಿಜ್ವರ ಕಾಣಿಸಿಕೊಂಡ ಕಾರಣಕ್ಕೆ ಜಿಲ್ಲಾಡಳಿತವೇ 7 ಸಾವಿರ ಜೀವಂತ ಕೋಳಿಗಳನ್ನು ವಧೆ ಮಾಡಿದೆ. ಹಕ್ಕಿಜ್ವರದಿಂದ ಕುರೇಕುಪ್ಪದಲ್ಲಿ 2400 ಕೋಳಿಗಳು ಸಾವಿನ ಮನೆ ಸೇರಿವೆ. ಜಿಲ್ಲೆಯಲ್ಲಿ ಈ ವರೆಗೆ 17400 ಕೋಳಿಗಳು ಸತ್ತಿವೆ. ಅಸಿಲ್ ಹಾಗೂ ಕಾವೇರಿ ತಳಿ ಕೋಳಿಗಳೇ ಹಕ್ಕಿಜ್ವರಕ್ಕೆ ಟಾರ್ಗೆಟ್ ಆಗಿವೆ.