ಯಾವುದು ಕವಿತೆ? ಪ್ರಶ್ನೆ ನನ್ನನ್ನೂ ಕಾಡಿದ್ದಿದೆ. ಇದಕ್ಕೆ ನಿರ್ದಿಷ್ಟ ವ್ಯಾಖ್ಯಾನಗಳಿಲಲ್ಲವಾದರೂ ಆದಿಕವಿ ಪಂಪನಿಂದ ಮೊದಲುಗೊಂಡು ರನ್ನ, ಜನ್ನ, ಹರಿಹರ ಮೊದಲುಗೊಂಡು ಇತ್ತೀಚಿಗಿನ ಚಂಪಾ ಅವರವರೆಗೂ ಮತ್ತು ಈಗಲೂ ಬರೆಯುತ್ತಿರುವ ಹೊಸ ತಲೆಮಾರಿನ ಕವಿಗಳಿಗೂ ಈ ಪ್ರಶ್ನೆ ಎದುರಾಗಿದ್ದು ಸಹಜ. ಹೀಗಾಗಿ ಅಂದದ್ದು ಕವಿತೆಯಲ್ಲ, ಕಂಡದ್ದು ಕವಿತೆಯಲ್ಲ, ಕೇಳಿದ್ದು ಕವಿತೆಯಲ್ಲ ಬದಲಿಗೆ ಸ್ವಾನುಭವಕ್ಕೆ ಬಂದುದೇ ಕವಿತೆ ಎಂದು ನನ್ನೊಳಗೆ ನಾನೇ ಕವಿತೆಗೊಂದು ನಿರ್ದಿಷ್ಟ ವ್ಯಾಖ್ಯಾನವನ್ನು ಕಂಡುಕೊಂಡಿದ್ದೆ. ಆ ಕ್ಷಣದಲ್ಲಿ ಹೊಳೆದ ನನ್ನ ಸಾಲುಗಳು ಇಂತಿವೆ.
ಆಕೆ ನೆನಪಾದ ಪ್ರತಿ ಬಿಸಿಯುಸಿರೂ ಕವಿತೆ
ಪ್ರತಿ ಬಿಕ್ಕಳಿಕೆ ಕವಿತೆ
ಅವಳ ನೆನಪಿನ ಪ್ರತಿ ಕಣ್ಣ ಹನಿಯೂ ಕವಿತೆ
ಅವಳ ಕಂಡಾಗಿನ ಆ ಕ್ಷಣದ ಉನ್ಮಾದ ಕವಿತೆ
ಆಹ್ಲಾದ ಕವಿತೆ
ಕಣ್ಮುಚ್ಚಿ ಧೇನಿಸಿದ ಎಲ್ಲವೂ ಕವಿತೆಯೇ
ಆಕೆ ಕವಿತೆ -ನಾನು ಕವಿ
ಕವಿತೆ ಸಾಹಿತ್ಯದ ಪುಟ್ಟ ಭಾಗವಾಗಿದ್ದರೂ ಇಡೀ ಸಾಹಿತ್ಯದ ಜೀವ ಬೇರು. ಅಂತಹ ಕವಿತೆಯ ಸಂಕಲನ ‘ಜೀರೋ ಬ್ಯಾಲೆನ್ಸ್’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ದಕ್ಕಿದ್ದು ಕಾವ್ಯದ ಹಿರಿಮೆಯೇ ಸರಿ.
‘ಜೀರೋ ಬ್ಯಾಲೆನ್ಸ್’ ಡಾ. ಶೃತಿ ಬಿ.ಆರ್. ಅವರ ಚೊಚ್ಚಲ ಸಂಕಲನವಾಗಿದೆ. ಈಗಾಗಲೇ ಈ ಕೃತಿ ಹಲವು ಪ್ರಮುಖ ಪುರಸ್ಕಾರಗಳಿಗೆ ಭಾಜನವಾಗಿದ್ದು, ಇಲ್ಲಿನ ಪ್ರತಿ ಕವಿತೆಯೂ ಏನನ್ನೋ ಹೇಳುವ ತುಡಿತದಲ್ಲಿವೆ. ಇಲ್ಲಿನ ಕವಿತೆಗಳು ತರಾತುರಿಯಿಂದ ಕೂಡಿರದೇ ಹೇಳಬಹುದಾದ ಅನುಭವಗಳೆಲ್ಲ ಕವಯತ್ರಿಯ ಅಂತರಾಳದೊಳಗೆ ಕುದಿದು ಸ್ವಾನುಭವದಲಿ ಮಿಂದು ಮೇಳೈಸಿ ಪದಕಾವ್ಯದ ತೋರಣವಾಗಿ ಮೂಡಿ ಬಂದಿವೆ.
‘ಮೈತುಂಬ ಸೆರಗೊದ್ದಿದ್ದರೂ ಮೆಸೇಜುಗಳಲ್ಲೇ ಮೈ ಸವರಿ, ಆನ್ ಲೈನಿನಲ್ಲೇ ಸ್ಖಲಿಸಿ ಸುಖಿಸುವ ಇಂದ್ರರ ಕಂಡು ಅಸಹ್ಯದಿಂದ ಮತ್ತೇ ಕಲ್ಲಾಗಬೇಕಂತೆ ಅಹಲ್ಯೆ’ ಈ ಸಾಲುಗಳು ಹೃದಯಕ್ಕೆ ನಾಟುವಂತಿವೆ. ವಾಸ್ತವದ ಗಂಡು ಯಾವ ದಿಕ್ಕಿನತ್ತ ಹೊರಟು ನಿಂತಿದ್ದಾನೆ ಎಂಬುದನ್ನು ಕೊರಳ ಪಟ್ಟಿ ಹಿಡಿದು ಕೇಳುವಂತೆ ಕವಿತೆಯಲ್ಲಿ ಇಡೀ ಸಮಾಜದ ಹೆಣ್ಣು ಧ್ವಿನಿಸಿರುವುದು ಕಂಡು ಬಂದಿದೆ.
ಕೈ ಜಾರಿದ ಕವಿತೆಗಳನ್ನು ಕವಯತ್ರಿ ಇಲ್ಲಿ ‘ಇನ್ನಾರದೋ ಸೊತ್ತಾದ ಹಳೆಯ ಪ್ರೇಯಸಿ’ಗೆ ಹೋಲಿಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ. ಪ್ರೀತಿ, ಪ್ರೇಮ, ಮುನಿಸು, ಇಗೋ, ಅತ್ಯಾಚಾರ, ಆತ್ಮ-ಸ್ವಗತ, ಆಶಾವಾದ, ಸಾವು ಹೀಗೆ ನಮ್ಮ ಬದುಕಿನ ಎಡ-ಬಲಗಳನ್ನೆಲ್ಲ ಒಂದೊಂದಾಗಿ ತಮ್ಮ ಕವಿತೆಗಳ ಮೂಲಕ ಓದುಗನೆದುರು ಸ್ಪಷ್ಟ ಕನ್ನಡಿಯಂತೆ ಬಿಂಬಿಸುವ ಪ್ರಯತ್ನವನ್ನು ಕವಯತ್ರಿ ಇಲ್ಲಿ ಮಾಡಿದ್ದಾರೆ. ‘ಪ್ರೇಮ ಬರೆಯಲಿಕ್ಕುಂಟು ಮಾಡಲಿಕ್ಕಲ್ಲ’ ಅನ್ನೋ ಸಾಲು ಗಮನಾರ್ಹ.
ಶೀರ್ಷಿಕೆಯ ಕವಿತೆ ‘ಜೀರೋ ಬ್ಯಾಲೆನ್ಸ್’ ನಲ್ಲಿ ಬಡ ಮಧ್ಯಮ ವರ್ಗದ ಜೀವನ ನಿರ್ವಹಣೆಯ ಕಷ್ಟಗಳನ್ನು ಬಿಂಬಿಸಿದರೆ, ‘ಜನ ಮಾತಾಡಲಿಲ್ಲ’ ಅನ್ನೋ ಕವಿತೆಯಲ್ಲಿ ಸಮಾಜ ನನ್ನ ಬಗ್ಗೆ ಏನಂದುಕೊಳ್ಳುತ್ತೋ ಎಂಬ ಆತಂಕದಲ್ಲಿರುವ ಜನರಿಗೆ ಮತ್ತೊಬ್ಬರ ನಡತೆಯ ಬಗ್ಗೆ ಸುಲಭವಾಘಿ ಮಾತಾಡುವ ಜನ ಅವರ ಸಂಕಷ್ಟದಲ್ಲಿ ಮಾತಾಡುವ ಮನಸ್ಸು ಮಾಡಲಿಲ್ಲ ಅನ್ನೋ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸಿದ್ದಾರೆ. ಅಕ್ಕನ ಮೊಹಂಜೋದಾರೋ, ಆತ್ಮಕ್ಕಿಲ್ಲ ಸಂಗಾತ, ಋತು ಸಂಕಟ, ಒಳ್ಳೆಯವರಾಗುವುದೆಂದರೆ, ಹೀಗೆಕೇ, ಒಲವ ಸಮಾಧಿಯಿಂದ, ಅಂತರ ಮೇಲರಿಮೆ ಮೊದಲಾದ ಕವಿತೆಗಳಲ್ಲಿ ಸಮಾಜದ ಶೋಷಿತರು ಮತ್ತು ಹೆಣ್ಣಿನಂತರಾಳದ ಧ್ವನಿಯಾಗಿದ್ದಾರೆ.
‘ಬಾಬಾಸಾಹೇಬರು ನೆಟ್ಟ ಮರ’ ಕವಿತೆಯೂ ಒಳಗೊಂಡಂತೆ ಕೆಲವು ಕವಿತೆಗಳು ಅಲ್ಲಲ್ಲಿ ವಾಚ್ಯವಾಗಿದ್ದರೂ ಅವುಗಳೊಳಗಿನ ಸಂದೇಶಗಳು ಜನಹಿತವನ್ನೇ ಬಯಸುವಂತಿವೆ. ಅವನ ಬಗ್ಗೆ ಒಂದಿಷ್ಟು ಕವಿತೆಯೊಳಗಿನ ‘ಹೂವಿಲ್ಲದೂರಿನಲ್ಲೂ ಚಿಟ್ಟೆಗಳು ಹಾರಿದಂತೆ, ಕಡುಗೆಂಪಿನ ಗುಲಾಬಿಯಲ್ಲಿ ಹಾದಿ ಬದಿಯ ನೀಲಿ ಹೂ’ ರೂಪಕಗಳು ಮನಸೆಳೆಯುವಂತಿವೆ.
ಡಾ.ಶೃತಿ ಬಿ.ಆರ್ ಅವರು ಎಂ.ಎ. ಸ್ನಾತಕೋತ್ತರ ಪದವೀಧರೆಯಾಗಿದ್ದು, ಕೆ.ಎ.ಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತ ನಿರ್ವಹಣೆ ಜೊತೆ ಜೊತೆಗೆ ಕಾವ್ಯದ ಮೂಲಕ ಸಾಹಿತ್ಯದ ಪರಿಚಾರಕಿಯಾಗಿ ಗುರುತಿಸಬಲ್ಲ ಕವಯತ್ರಿಯಾಗಿ ನಮ್ಮ ನಡುವೆ ಪಯಣಿಸುತ್ತಿರುವುದು ಹೆಮ್ಮೆಯ ಸಂಗತಿ. ಇನ್ನಷ್ಟು ಮತ್ತಷ್ಟು ಗಟ್ಟಿ ಕವಿತೆಗಳು ಇವರಿಂದ ಮೂಡಿ ಬರಲಿ ಅಂತ ಆಶಿಸುತ್ತ ‘ಜೀರೋ ಬ್ಯಾಲೆನ್ಸ್’ ಇಡೀ ಸಂಕಲನ ಕಾವ್ಯ ಪ್ರಿಯರ ಕಾವ್ಯ ದಾಹವನ್ನು ತಣಿಸಬಲ್ಲ ಕೃತಿಯಾಗಿದೆ ಎಂದೇ ಹೇಳಬಹುದು.
♦ಸಿದ್ದರಾಮ ತಳವಾರ, ಯುವ ಸಾಹಿತಿ