ಹರಪನಹಳ್ಳಿ (ವಿಜಯನಗರ ಜಿಲ್ಲೆ) : 2028ರ ವರೆಗೆ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ತಿಳಿಸಿದರು.
ತಾಲ್ಲೂಕಿನ ತಾವರಗುಂದಿ ಗ್ರಾಮದ ಬಳಿ ತುಂಗಭದದ್ರಾ ನದಿತಟದಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಹಮ್ಮಿಕೊಂಡಿದ್ದ ಮಕರ ಸಂಕ್ರಮಣ ನಿಮಿತ್ತ ಜಾನಪದ ಸಂಕ್ರಾಂತಿ ಕಾರ್ಯಕ್ರಮ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನವೆಂಬರ್, ಡಿಸೆಂಬರ್, ಸಂಕ್ರಾಂತಿ ಎಲ್ಲವೂ ಮುಗಿದಿದೆ. ಸಿಎಂ ಬದಲಾವಣೆ ಹೈಕಮಾಂಡ್ ನಿಂದ ಮಾತ್ರ ಸಾಧ್ಯ, ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಾಗಿರುತ್ತೇವೆ. 2028ರ ವರೆಗೂ ಸಿಎಂ ಕುರ್ಚಿ ಖಾಲಿಯಿಲ್ಲ ಎಂದು ಹೇಳಿದರು.
ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ತಮಿಳುನಾಡಿಗೆ ಹೋಗುವಾಗ ಮೈಸೂರಿಗೆ ಬಂದಿಳಿದು ಹೋಗಿದ್ದಾರೆ. ಅವರು ಬಂದಾಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರು ಖುದ್ದು ಬೇಟಿಯಾಗಿ ಹೈಕಮಾಂಡ್ ಸ್ವಾಗತಿಸಿರುವುದು ಸಹಜ ಪ್ರಕ್ರಿಯೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಗಳ ಜೊತೆ ರಾಜಕಾರಣಿಗಳು ಪ್ರೀತಿಯಿಂದ ಮಾತನಾಡಬೇಕು. ರಾಜೀವಗೌಡ ಅವರ ಭಾಷಣ ನಾನು ಕೇಳಿದೆ, ಅವರು ಮಾತನಾಡಿರುವುದು ತಪ್ಪು. ಎಂ.ಪಿ.ಪ್ರಕಾಶ್ ಅವರು ನವೆಂಬರ್ ನಲ್ಲಿ ಹಂಪಿಉತ್ಸವ ಮಾಡುತ್ತಿದ್ದರು, ಅದೇ ದಿನಾಂಕಕ್ಕೆ ಮಾಡಲು ಶಾಸಕಿ ಎಂ.ಪಿ.ಲತಾ ಅವರು ಮನವಿ ಮಾಡಿದ್ದರು. ಕೋವಿಡ್ ಬಳಿಕ ಆ ಸಂಪ್ರದಾಯ ತಪ್ಪಿದೆ. 2026ರಲ್ಲಿ ಫೆಬ್ರವರಿ 13,14 ಮತ್ತು 15ರಂದು ಉತ್ಸವ ಜರುಗಲಿದೆ. ಇದಾದ ಬಳಿಕ ಎಂ.ಪಿ.ಪ್ರಕಾಶ್ ಅವರು ಮಾಡಿರುವ ದಿನಾಂಕದಂತೆ ಮಾಡುವ ಬಗ್ಗೆ ನಿರ್ಧರಿಸುತ್ತೇವೆ ಎಂದರು.
ಕಳೆದ ಚುನಾವಣೆಯಲ್ಲಿ ಶಿವಶಂಕರಪ್ಪ ಅವರೇ ನನ್ನದು ಕೊನೆ ಚುನಾವಣೆ ಎಂದು ಹೇಳಿದ್ದರಂತೆ. ಆ ಹಿನ್ನೆಲೆಯಲ್ಲಿ ದಾವಣಗೆರೆಯಿಂದ ಬಹಳ ಜನ ಮುಖಂಡರು ಆಗಮಿಸಿ, ದಾವಣಗೆರೆ ದಕ್ಷಿಣ ವಿದಾನಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡಲು ಮನವಿ ಮಾಡಿದ್ದಾರೆ. ಟಿಕೆಟ್ ವಿಚಾರವನ್ನು ನಮ್ಮ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಹೊನ್ನಾಳಿ ಶಾಸಕ ಡಿ.ಜೆ.ಶಾಂತನಗೌಡ, ಮುಖಂಡ ಎಚ್.ಎಂ.ಮಲ್ಲಿಕಾರ್ಜುನ, ಎಚ್.ಎಂ.ಗೌತಮ್ ಪ್ರಭು ಇದ್ದರು.


