ಬೆಂಗಳೂರು, ಆಗಸ್ಟ್ 21: ಮುಖ್ಯಮಂತ್ರಿ ಸಿದ್ದಾರಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಲ್ಲದೇ, ಬಾಂಗ್ಲಾದೇಶ ಪ್ರಧಾನಿಯಂತೆ ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ Z ಕೆಟಗರಿ ಸೆಕ್ಯೂರಿಟಿ ನೀಡಿದೆ. ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರು ತರಿಸಿಕೊಂಡಿದ್ದಾರೆ. ಆಗಸ್ಟ್ 29ರವರೆಗೆ ಎಲ್ಲ ಸಾರ್ವಜನಿಕ ಕಾರ್ಯಕ್ರಮ ಮುಂದೂಡಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಷ್ಟು ದಿನಗಳ ಕಾಲ ಇನೋವಾ ಕಾರಿನಲ್ಲಿ ಓಡಾಡುತ್ತಿದ್ದರು. ಆದರೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿದ ನಂತರ ರಾಜ್ಯಪಾಲರಿಗೆ ಕೆಲ ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದರು. ಇದರ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆ ಬಿಗಿ ಭದ್ರತೆ ಒದಗಿಸಿದೆ.
ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ MLC ಐವನ್ ಡಿಸೋಜಾ ಮಾತನಾಡಿ, ಬಾಂಗ್ಲಾದೇಶದ ಹಿಂದಿನ ಪ್ರಧಾನಿಗೆ ಆದ ಗತಿಯೇ ನಿಮಗೂ ಆಗುತ್ತದೆ. ನೀವು ರಾಜ್ಯ ಬಿಟ್ಟು ಪಲಾಯನ ಮಾಡಬೇಕಾಗುತ್ತದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಎಚ್ಚರಿಕೆ ನೀಡಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ್ದ, ಕಾಂಗ್ರೆಸ್ ನಾಯಕ ಸಲೀಂ ಅಹ್ಮದ್, ಸಚಿವ ಕೃಷ್ಣಭೈರೇಗೌಡ ರಾಜ್ಯಪಾಲರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದರು. ರಾಜ್ಯಪಾಲರೇ ನಾಚಿಕೆ ಇದ್ಯಾ ನಿಮಗೆ’ ಆಯೋಗ್ಯ ರಾಜ್ಯಪಾಲರು ಎನ್ನಬೇಕು ಎಂದು ಕಿಡಿಕಾರಿದ್ದರು.
ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ಹಾಗೂ ಪೂರ್ವ ನಿಯೋಜಿತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರ ನಿಯೋಗ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದೆ.