ಬೆಳಗಾವಿ,ಜುಲೈ15: ಮೊಬೈಲ್, ಟಿವಿ ಮಾಧ್ಯಮಗಳ ಅಧಿಕ ಬಳಕೆಯಿಂದ ಯುವಪೀಳಿಗೆ ಓದುವ ಸಂಸ್ಕೃತಿಯಿಂದ ವಿಮುಖವಾಗುತ್ತಿರುವುದು ಕಳವಳಕಾರಿ ಎಂದು ಸಾಹಿತಿ ಶಿ.ಗು ಕುಸುಗಲ್ಲ ಬೇಸರಗೊಂಡರು.. ಜೀವನಾನುಭವದ ಹಿರಿಯರ ಹಿತ ನುಡಿಗಳನ್ನು ಆಲಿಸುವ, ಪಾಲಿಸುವ ವ್ಯವಧಾನ ಇಂದಿನ ಮಕ್ಕಳಿಗೆ ಇಲ್ಲದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಮತೀರ್ಥ ನಗರದ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಕನ್ನಡ ಬಳಗದ ಆಶ್ರಯದೊಂದಿಗೆ ಆಯೋಜಿಸಿದ್ದ ಜನ ಜಾಗೃತಿ ಸಭೆಯಲ್ಲಿ ಸಾಹಿತಿ ಕುಸುಗಲ್ಲ ಮಾತನಾಡಿದರು. ಹೆತ್ತವರು ಮಕ್ಕಳ ತಾತ್ಸಾರ, ಅನಾದರಗಳಿಗೆ ಇಂದು ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹದಗೆಟ್ಟ ಸಮಾಜಕ್ಕೆ ಸಾಕ್ಷಿಯಾಗುತ್ತದೆ ಎಂದು ವಾಸ್ತವತೆ ತೆರೆದಿಟ್ಟರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಚೇರ್ಮನ್ ಡಾ.ಕೆ.ಡಿ.ದೇಶಪಾಂಡೆ ಸ್ವಾಗತಿಸಿದರು. ಸಂಗೀತ ವಿದ್ವಾಂಸ ಶ್ರೀರಂಗ ಜೋಶಿ ಹಾಗೂ ಹಿರಿಯ ಸಾಹಿತಿಗಳಾದ ಸ.ರಾ.ಸುಳಕುಡೆ, ಉಳ್ಳೆಗಡ್ಡಿ, ಗ್ರಂಥ ಪಾಲಕ ಪ್ರಕಾಶ ಈಚಲಕರಂಜಿ ಮೊದಲಾದವರು ಮಾತನಾಡಿದರು. ಋಷಿಕೇಶ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.