ಶ್ರೀನಗರ: ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ಉತ್ತರ ಮತ್ತು ಪಶ್ಚಿಮ ಅಂತಾರಾಷ್ಟ್ರೀಯ ಗಡಿಗಳ ಉದ್ದಕ್ಕೂ ರಾತ್ರಿ ವೇಳೆ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿ, ಗುಂಡಿನ ದಾಳಿ ನಡೆಸುತ್ತಿತ್ತು. ಹಲವು ದಿನಗಳ ಬಳಿಕ ಮೊದಲ ಬಾರಿಗೆ ಮೇ 11 ಮತ್ತು ಮೇ 12ರ ರಾತ್ರಿಯು ಶಾಂತಿಯುತವಾಗಿ ಕಳೆದಿದೆ ಎಂದು ಸೇನೆ ತಿಳಿಸಿದೆ.
ಸೇನೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಮತ್ತು ಅಂತಾರಾಷ್ಟ್ರೀಯ ಗಡಿಯ ಉದ್ದಕ್ಕೂ ಇರುವ ಪ್ರದೇಶಗಳು ಕಳೆದ ರಾತ್ರಿ ಶಾಂತವಾಗಿದ್ದವು. ಯುದ್ಧ ವಿರಾಮದ ಉಲ್ಲಂಘನೆಯ ಯಾವುದೇ ಘಟನೆಗಳು ವರದಿಯಾಗಿಲ್ಲ.
ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಆರಂಭಿಸಿದ ಆಪರೇಷನ್ ಸಿಂಧೂರಕ್ಕೆ ಪ್ರತಿಯಾಗಿ ಪಾಕಿಸ್ತಾನವು ಗಡಿಯಾಚೆಗಿನ ಗುಂಡಿನ ದಾಳಿ, ಭಾರೀ ಫಿರಂಗಿ ಶೆಲ್ ಮತ್ತು ಡ್ರೋನ್ ದಾಳಿ ನಡೆಸಿತ್ತು. ಕೆಲ ದಿನಗಳಿಂದಲೂ ಇಲ್ಲಿ ಕೇಳಿಬರುತ್ತಿದ್ದ ಗುಂಡಿನ ಸದ್ದು ಮೊದಲ ಬಾರಿಗೆ ನಿನ್ನೆ ರಾತ್ರಿ ಇರಲಿಲ್ಲ ಎಂದು ಸೇನೆ ತಿಳಿಸಿದೆ.
ಕೆಲ ದಿನಗಳಿಂದ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಪಂಜಾಬ್ ಮತ್ತು ಗುಜರಾತ್ನ ಗಡಿ ಪ್ರದೇಶಗಳು ಪಾಕಿಸ್ತಾನವು ಭಾರೀ ಶೆಲ್ ಮತ್ತು ಡ್ರೋನ್ ದಾಳಿಯ ಮೂಲಕ ಶಾಂತಿ ಭಂಗಗೊಳಿಸುವ ಯತ್ನ ಸಾಗಿತ್ತು. ಇದಕ್ಕೆ ಪ್ರತಿಯಾಗಿ, ಆಪರೇಷನ್ ಸಿಂಧೂರದ ಮೂಲಕ ಭಾರತೀಯ ಸೇನೆಯು ಪಾಕಿಸ್ತಾನದೊಳಗಿನ ಉಗ್ರರ ನೆಲೆಗಳು ಹಾಗೂ ಹಲವು ವಾಯುನೆಲೆಗಳ ಮೇಲೆ ದಾಳಿ ನಡೆಸಿತ್ತು. ಅಲ್ಲಿನ ಸೇನಾ ಸಾಮರ್ಥ್ಯದ ಮೇಲೆ ಗಮನಾರ್ಹ ಹಾನಿ ಆಗಿರುವುದಾಗಿ ಸೇನೆ ತಿಳಿಸಿದೆ.