ಬೆಂಗಳೂರು, ಅಕ್ಟೋಬರ್ 21: ಕರ್ನಾಟದಲ್ಲಿ ಇಂದು ಭಾರಿ ಮಳೆಯಾಗುವಸಾಧ್ಯತೆಯಿದೆ. ಹವಾಮಾನ ಇಲಾಖೆ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.ಕರಾವಳಿಯಲ್ಲಿ ವರುಣಾರ್ಭಟ ಮುಂದುವರಿಯಲಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಶಿವಮೊಗ್ಗ, ತುಮಕೂರು, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಸೂಚಿಸಿದೆ. ಉಳಿದ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೂ ಅಲರ್ಟ್ ಘೋಷಿಸಿದ್ದು, ಇಡೀ ಕರ್ನಾಟಕದಲ್ಲಿಂದು ವರುಣನ ಆರ್ಭಟವಿರಲಿದೆ. ಕರಾವಳಿ ಪ್ರದೇಶದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ವೈಪರೀತ್ಯದ ಕಾರಣ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ದಕ್ಷಿಣ ಒಳನಾಡು ಪ್ರದೇಶದ ಜಿಲ್ಲೆಗಳಾದ ಕೊಡಗು, ಹಾಸನ, ಮೈಸೂರು, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ಬಿರುಗಾಳಿಯೊಂದಿಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಜಿಲ್ಲೆಗಳಾದ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಇರುವ ಸಾಧ್ಯತೆ ಇದೆ.