•ಸರ್ವೋನ್ನತ ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ ಎಂದ ಖಂಡ್ರೆ
ಬೀದರ್, ಸೆ.17: ಗುಲ್ಬರ್ಗಾ ಜಿಲ್ಲೆ ಚಿಂಚೋಳಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸೇರಿದ ಸಿದ್ದಸಿರಿ ಸಕ್ಕರೆ ಮತ್ತು ಡಿಸ್ಟಿಲರಿ ಕಾರ್ಖಾನೆ ಪ್ರಕರಣ ಪ್ರಸ್ತುತ ಸುಪ್ರೀಂಕೋರ್ಟ್ ನಲ್ಲಿದೆ, ಈ ಹಂತದಲ್ಲಿ ರೈತರಿಂದ ಪ್ರತಿಭಟನೆ ಮಾಡಿಸಿ, ಒತ್ತಡ ಹೇರುವುದು ಸರಿಯಾದ ಕ್ರಮವಲ್ಲ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಬಿಜೆಪಿ ಶಾಸಕರಿಗೆ ನ್ಯಾಯಾಲಯದ ಮೇಲೆ ಗೌರವ ಇದ್ದರೆ ತೀರ್ಪು ಬರುವ ತನಕ ಕಾಯಬೇಕು, ಸುಪ್ರೀಂಕೋರ್ಟ್ ಕಾರ್ಖಾನೆಗೆ ಅನುಮತಿ ನೀಡುವಂತೆ ಸೂಚಿಸಿದರೆ ಸರ್ಕಾರ ಅನುಮತಿ ನೀಡುತ್ತದೆ, ಇದರಲ್ಲಿ ರಾಜಕೀಯ ದ್ವೇಷದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ಈ ಪ್ರಕರಣದಲ್ಲಿ ರಾಜ್ಯ ಘನ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಯತ್ನಾಳ್ ಅವರಿಗೆ ಸೇರಿದ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಗಮ (ಎಸ್ಎಸ್ಎಸ್ಎನ್) ಕಾನೂನು, ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ಮಾಡಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ. ಈ ನೆಲದ ಕಾನೂನು ಎಲ್ಲರಿಗೂ ಒಂದೇ, ಬಿಜೆಪಿ ಶಾಸಕರಿಗೆ ಪ್ರತ್ಯೇಕ ಕಾನೂನು ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯಾಚರಣೆ ಸಮ್ಮತಿ ಪತ್ರ (ಸಿ.ಎಫ್.ಓ.) ಪಡೆಯದೆ ಕೈಗಾರಿಕೆ ನಡೆಸಿರುವುದು ಕಾನೂನು ಬದ್ಧವೇ ಎಂದು ಪ್ರಶ್ನಿಸಿರುವ ಖಂಡ್ರೆ, ಕಾರ್ಖಾನೆ ಪೂರ್ವಾನುಮತಿ ಇಲ್ಲದೆ ತನ್ನ ಸಾಮರ್ಥ್ಯ ವಿಸ್ತರಣೆ ಮಾಡಿ ಕಾನೂನು ಬಾಹಿರವಾಗಿ ಕಾರ್ಯಾಚರಣೆ ನಡೆಸಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಇಲಾಖೆಯೇ 1.58 ಕೋಟಿ ದಂಡ ವಿಧಿಸಿದೆ ಎಂದು ತಿಳಿಸಿದ್ದಾರೆ.
ಕಾನೂನು ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಲಯದ ಮೊರೆ ಹೋಗುವುದರಲ್ಲಿ ತಪ್ಪೇನು. ಜೊತೆಗೆ ನದಿಗೆ ಕೈಗಾರಿಕಾ ತ್ಯಾಜ್ಯ ಹರಿಯಬಿಟ್ಟಿರುವ ಆರೋಪವೂ ಈ ಕೈಗಾರಿಕೆಯ ಮೇಲಿದೆ. ರೈತರೇ ಈ ಬಗ್ಗೆ ಪ್ರತಿಭಟನೆ ಮಾಡಿದ್ದಾರೆ. ಇದು ಜಲ ಕಾಯಿದೆ ಮತ್ತು ಪರಿಸರ ಸಂರಕ್ಷಣಾ ಕಾಯಿದೆಯ ಉಲ್ಲಂಘನೆಯಾಗುತ್ತದೆ ಪರಿಸರ ಸಚಿವನಾಗಿ ಪ್ರಕೃತಿ, ಪರಿಸರ ಉಳಿಸುವ ಜವಾಬ್ದಾರಿ ನಿರ್ವಹಣೆ ಮಾಡಲೇ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ..
ನಿಯಮ ಉಲ್ಲಂಘಿಸುವ ಒಬ್ಬರಿಗೆ ಪೂರ್ವಾನ್ವಯವಾಗಿ ಸಿಎಫ್ಓ ಪಡೆಯಲು ಅನುಮತಿಸಿದರೆ, ಅದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ. ಹೀಗಾಗಿ ಕೆ.ಎಸ್.ಪಿ.ಸಿ.ಬಿ. ಕಾನೂನು ರೀತ್ಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ದ್ವೇಷದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದೆಲ್ಲವೂ ಕಪೋಲ ಕಲ್ಪಿತ ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಬಿಜೆಪಿ ಶಾಸಕರು ಕಾಯಬೇಕು, ಹೀಗೆ ರೈತರಿಂದ ಪ್ರತಿಭಟನೆ ಮಾಡಿಸಿ ಒತ್ತಡ ಹೇರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.