ಬೆಳಗಾವಿ : ಭೂಮಿ ಒತ್ತುವರಿ ಆಗಿರುವುದಕ್ಕೆ ಕಂದಾಯ ಸಚಿವಾಲಯ ನೋಟಿಸ್ ಕೊಟ್ಟಿದೆ. ಯಾರನ್ನೂ ಒಕ್ಕಲೆಬ್ಬಿಸಲ್ಲ. ಯಾರಿಗೂ ಅನ್ಯಾಯ ಮಾಡಲ್ಲ. ಎಲ್ಲರನ್ನು ಸಮಾನರಾಗಿ ಕರೆದುಕೊಂಡು ಹೋಗುವುದೇ ನಮ್ಮ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಕ್ಫ್ ಸೊತ್ತುಗಳನ್ನು ರಾಷ್ಟ್ರೀಕರಣ ಗೊಳಿಸಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕಿಡಿಕಾರಿದರು. ಯತ್ನಾಳ್ ಬಗ್ಗೆ ಮಾತನಾಡಲು ಏನೂ ಇಲ್ಲ. ಅವರಿಗೆ ಹಿಂದೂ – ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ . ಅದನ್ನು ಹೇಳಿಕೊಂಡೆ ಅವರು ಗೆದ್ದುಕೊಂಡು ಬಂದವರು. ಮಹಾತ್ಮ ಗಾಂಧಿ ಅಂಬೇಡ್ಕರ್ ಹೇಳಿ ಕೊಟ್ಟಂತೆ ಬದುಕುವವರು ನಾವು ಎಂದರು.
ಎಚ್.ವಿಶ್ವನಾಥ್ ಹೇಳಿಕೆಗೆ ಗರಂ: ಬಿಯರ್ ರೇಟ್ ಜಾಸ್ತಿ ಮಾಡಿ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ ಎಂಬ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಹಿಳೆಯರಿಗೆ ಮೊದಲು ಗೌರವ ಕೊಡಿ, ಬಿಯರ್ ಗಿಯರ್ ಆಮೇಲೆ ಮಾತಾಡಿ. ಭಾಗ್ಯ ಯೋಜನೆಗಳಿಂದ ಜಿಡಿಪಿ ಜಾಸ್ತಿಯಾಗಿದೆ. ವಿಶ್ವನಾಥ್ ಹಿರಿಯರು ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ಬಿಡಲಿ. ರಾಜ್ಯದಲ್ಲಿ, ದೇಶದಲ್ಲಿ ಮಹಿಳೆಯರಿಗೆ ಉತ್ತೇಜನ ಕೊಡಲು ಯೋಜನೆ ಮಾಡಿದ್ದೇವೆ. ಈಗ ರಾಜ್ಯದಲ್ಲಿ ಮಹಿಳಾ ಸಬಲೀಕರಣ ನಡೆಯುತ್ತಿದೆ. ಬಸವಣ್ಣನ ನಾಡಿನಲ್ಲಿ ಮಹಿಳೆಯರನ್ನು ಸರಿಸಮನಾಗಿ ಕಾಣಿರಿ ಎಂದು ಹೇಳಿದರು.
ಶೀಘ್ರವೇ ಉಡುಪಿಯಲ್ಲಿ ಜನತಾ ದರ್ಶನ ಮಾಡುತ್ತೇವೆ.ಉಡುಪಿ ಜಿಲ್ಲೆಯಲ್ಲಿ ಧರ್ಮ ದಂಗಲ್ ಗೆ ಅವಕಾಶ ಕೊಡಲ್ಲ. ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ ಎಂದು ಸಚಿವರು ತಿಳಿಸಿದರು.
ಕಾಂಗ್ರೆಸ್ಸಿಗರು ನಗರ ನಕ್ಸಲರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಧಾನಮಂತ್ರಿಗಳು ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಪಕ್ಷಾತೀತವಾಗಿ ನರೇಂದ್ರ ಮೋದಿ ನಮ್ಮ ಪ್ರಧಾನಿಗಳು. ನಮ್ಮ ಪ್ರಧಾನಿ ಮೇಲೆ ನಮಗೆ ಗೌರವ ಇದೆ. ಕಾಂಗ್ರೆಸ್ಸನ್ನು ಗುರಿಯಾಗಿಸಿ ಅವರು ಈ ಮಾತನಾಡಿದ್ದರೆ ಅದು ಅಸಂವಿಧಾನಿಕ ಮಾತಾಗುತ್ತದೆ ಎಂದರು.