ಬೆಂಗಳೂರು, ಸೆಪ್ಟೆಂಬರ್ 29: ಭಾರಿ ಮಳೆ ಹಿನ್ನಲೆ ಉಜನಿ ಮತ್ತು ಸಿನಾ ಡ್ಯಾಂಗಳು ಸೇರಿ ಮಹಾರಾಷ್ಟ್ರ ಭಾಗದಿಂದ ಭೀಮಾ ನದಿಗೆ ಭಾರಿ ನೀರು ಹರಿಬಿಟ್ಟಿರುವ ಕಾರಣ ನದಿ ತೀರದ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಕರ್ನಾಟಕದ ಕಲಬುರಗಿ, ಬೀದರ್ ಮತ್ತು ಯಾದಗಿರಿಯ ಬಹುತೇಕ ಪ್ರದೇಶಗಳಲ್ಲಿ ಜನರ ಬದುಕು ಬೀದಿಗೆ ಬಂದಿದ್ದು, ಹಳ್ಳಿಗೆ ಹಳ್ಳಿಯೇ ದ್ವೀಪವಾಗಿ ಮಾರ್ಪಟ್ಟಿವೆ. ಸುಮಾರು 8 ಸಾವಿರಕ್ಕೂ ಅಧಿಕ ಜನರಿಗೆ ಪ್ರವಾಹದಿಂದಾಗಿ ತೊಂದರೆ ಉಂಟಾಗಿದ್ದು, ಗಂಜಿ ಕೇಂದ್ರಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ.
ಭೀಮೆ ಅಬ್ಬರಕ್ಕೆ ನಲುಗಿದ ಕಲಬುರಗಿ, ಯಾದಗಿರಿ

ಭೀಮೆಯ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ 50ರ ಸಂಚಾರ ಸತತ ಎರಡನೇ ದಿನವೂ ಬಂದ್ ಆಗಿದೆ. ಭೀಮಾನದಿಗೆ ಅಡ್ಡಲಾಗಿ ಕಟ್ಟಿಸಂಗಾವಿ ಸೇರಿ ಹಲವೆಡೆ ನಿರ್ಮಿಸಲಾಗಿರುವ ಸೇತುವೆಗಳು ಜಲಾವೃತವಾದ ಪರಿಣಾಮ, ಸಾವಿರಾರು ವಾಹನಗಳು ರಸ್ತೆಯಲ್ಲಿಯೇ ನಿಂತಿವೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಲಾರಿಗಳೇ ಸೇತುವೆ ಸಮೀಪ ನಿಂತಿರುವ ದೃಶ್ಯಗಳು ಕಂಡುಬಂದಿವೆ. ಜೇವರ್ಗಿ ತಾಲೂಕಿನ ವಿವಿಧೆಡೆ ಪ್ರವಾಹದಲ್ಲಿ ಸಿಲುಕೊಂಡಿದ್ದ ಗ್ರಾಮಸ್ಥರನ್ನ SDRF ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

