ವಿಜಯಪುರ: ಪ್ರತಿ ವರ್ಷ ಜೂನ್ 3 ರಂದು “ವಿಶ್ವ ಬೈಸಿಕಲ್ ದಿನ’ವನ್ನು ಆಚರಿಸಲಾಗುತ್ತದೆ.ಈ ನಿಮಿತ್ತ ಇಂದು ತಾಲೂಕಿನ ನಾಗಠಾಣ ಗ್ರಾಮದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಸೈಕಲ್ ಸವಾರಿ ಮಾಡಿ ‘ವಿಶ್ವ ಬೈಸಿಕಲ್ ದಿನ’ವನ್ನು ಆಚರಿಸಿದರು.
ಸೈಕಲ್ ಎಂದರೆ ಅದೊಂದು ವಿಸ್ಮಯದ ವಿಶ್ವ. ಪುಟ್ಟಪುಟ್ಟ ಹೆಜ್ಜೆಯನಿಟ್ಟು ನಡೆವ ಕಂದಮ್ಮನಿಗೆ ಆಗಲೇ ಮೂರು ಚಕ್ರದ ಸೈಕಲ್, ತರಹೇವಾರಿ ಗೊಂಬೆಗಳ ಚಿತ್ತಾರದೊಂದಿಗೆ ಮನೆಯ ಹೊಸ ಸದಸ್ಯನಾಗಿ ಬಂದು ಬಿಡುತ್ತದೆ. ಮೂರು ಚಕ್ರದ ಸೈಕಲ್‌ನಲ್ಲಿ ಪ್ರಪಂಚವನ್ನೇ ಸುತ್ತಿದಂತೆ, ಮನೆಯ ಮೂಲೆಮೂಲೆಗಳನ್ನು ಸುತ್ತುವ ಪುಟಾಣಿಗಳ ಆನಂದವು ಪದಗಳಲ್ಲಿ ಹೇಳಲಾಗದು.
ಪುಟಾಣಿಗಳ ಸಾಮ್ರಾಜ್ಯಕ್ಕೆ ಈ ಪುಟ್ಟ ಸೈಕಲ್ಲೇ ಚಕ್ರವರ್ತಿ. ಹದಿಹರೆಯದ ವಯಸ್ಸಿನಲ್ಲಿ ಇಂಧನ ಬಳಸಿ ಸಾಗುವ ದ್ವಿಚಕ್ರ ವಾಹನಗಳಿಗೂ ಕಡಿಮೆ ಇಲ್ಲವೆಂಬಂತೆ, ಶರವೇಗದಲ್ಲಿ ತುಳಿಯುವ ಸಾಮಾನ್ಯ ಸೈಕಲ್ ಹಾಗೂ ಆಧುನಿಕ ಗೇರ್ ಸೈಕಲ್‌ಗಳು ಮಕ್ಕಳಿಗೆ ವ್ಯಾಯಾಮದೊಂದಿಗೆ ಪ್ರತಿಯೊಂದು ಕೆಲಸಕ್ಕೂ ಆಪ್ತಮಿತ್ರನಂತೆ ಜತೆಗೂಡುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ವಯಸ್ಕರು, ಹಿರಿಯ ನಾಗರಿಕರು ಕೂಡ ದೈಹಿಕ ಆರೋಗ್ಯದ ದಿವ್ಯಔಷಧ ಎಂಬಂತೆ ಸೈಕಲ್ ಅನ್ನು ಬಳಕೆ ಮಾಡುತ್ತಿರುವುದು ಸೈಕಲ್‌ನ ಸಾರ್ವಕಾಲಿಕ ಉಪಯುಕ್ತತೆಯನ್ನು ಎತ್ತಿ ಹಿಡಿದಿದೆ. ವಾಯು ಮಾಲಿನ್ಯದಿಂದ ತತ್ತರಿಸಿರುವ ಇಳೆಯ ಮಾಲಿನ್ಯದ ಕೊಳೆ ಕಡಿಮೆ ಮಾಡಲು ಸೈಕಲ್ ಬಳಕೆ ಬ್ರಹ್ಮಾಸ್ತ್ರವಿದ್ದಂತೆ.
ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸೈಕ್ಲಿಂಗ್ ಅತ್ಯಂತ ಪರಿಣಾಮಕಾರಿ ವ್ಯಾಯಾಮ. ಪ್ರತಿನಿತ್ಯ ಸೈಕಲ್ ತುಳಿಯುವುದರಿಂದ ನಾವು ಹಲವಾರು ಮಾರಕ ಕಾಯಿಲೆಗಳಿಂದ ದೂರ ಉಳಿಯಬಹುದಲ್ಲದೆ ಶಾರೀರಿಕ ವಾಗಿಯೂ ಸದೃಢರಾಗಿರಲು ಸಾಧ್ಯ.