ಬಳ್ಳಾರಿ, ಜನವರಿ 21: ಗಣಿನಾಡು ಬಳ್ಳಾರಿ ಕೆಎಂಎಫ್ ಕಚೇರಿ ಬಳಿ ಕಪ್ಪು ಗೊಂಬೆ, ದೊಡ್ಡ ಕುಂಬಳಕಾಯಿ, ತೆಂಗಿನಕಾಯಿ, 8 ನಿಂಬೆ ಹಣ್ಣು, ಕುಂಕುಂಮ ಹಾಕಿ ಮೊಳೆ ಹೊಡೆದು ಭಯಂಕರ ಮಾಟಮಂತ್ರ ಮಾಡಿರುವ ಘಟನೆ ನಡೆದಿದೆ. ಇದು ಬಳ್ಳಾರಿ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಸಿಸಿ ಕ್ಯಾಮರಾ, ಸಿಬ್ಬಂದಿ ಸರ್ಪಗಾವಲು ಮದ್ಯೆಯೇ ಕೆಎಂಎಫ್ ಆಡಳಿತ ಕಚೇರಿ ಮುಂದೆಯೇ ವಾಮಾಚಾರ ಮಾಡಿರುವುದು ಅಚ್ಚರಿಗೂ ಕಾರಣವಾಗಿದೆ.
ಸಣ್ಣ ಗಡಗಿಗೆ ದಾರ ಸುತ್ತಿ, ತೆಂಗಿನಕಾಯಿಗೆ ತಾಯತದ ತಗಡು ಕಟ್ಟಿ, ಗೊಂಬೆಯೊಂದನ್ನ ಇಟ್ಟು ಮತ್ತೊಂದು ಕವರ್ನಲ್ಲಿ ಏನೋ ಬರೆದಿಟ್ಟು ವಾಮಾಚಾರ ಮಾಡಲಾಗಿದೆ. ಭಯಂಕರ ಮಾಟ ಮಂತ್ರ ನೋಡಿ ಕೆಎಂಎಫ್ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಇಡೀ ಕೆಎಂಎಫ್ ಕಚೇರಿ ಸುತ್ತಲೂ ಅಷ್ಟೆಲ್ಲಾ ಸಿಸಿ ಕ್ಯಾಮರಾಗಳ ಕಣ್ಗಾವಲು, ಭದ್ರತಾ ಸಿಬ್ಬಂದಿ ನಡುವೆ ಈ ವಾಮಾಚಾರ ಹೇಗೆ ನಡೆಯಿತು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಸಿಸಿಟಿವಿ, ಭದ್ರತಾ ಸಿಬ್ಬಂದಿ ಮಧ್ಯೆ ಯಾರು? ಹೇಗೆ? ವಾಮಾಚಾರ ಮಾಡಿದರು ಎಂಬ ಪ್ರಶ್ನೆಗಳು ಮೂಡಿವೆ.
ಸದ್ಯ ಚುನಾಯಿತ ಆಡಳಿತ ಮಂಡಳಿ ಇಲ್ಲದೇ, ಹಿಂದಿನ ಆಡಳಿತ ಮಂಡಳಿಯನ್ನೇ ತಾತ್ಕಾಲಿಕವಾಗಿ ಮುಂದುವರೆಸಲಾಗಿದೆ. ಅದಕ್ಕೂ ಸಾಕಷ್ಟು ಅಸಮಾಧಾನ ಇದೆ ಎನ್ನಲಾಗ್ತಿದೆ. ಇನ್ನು ಕೆಎಂಎಫ್ ಬಗ್ಗೆ ಆಂತರಿಕ ಭಿನ್ನಾಭಿಪ್ರಾಯ ಇದ್ದವರು ಈ ಕಾರ್ಯ ಮಾಡಿದ್ದಾರೆಯೇ ಎಂಬ ಅನುಮಾನವೂ ಇದೆ.
ನಷ್ಟದಿಂದಾಗಿ ವೆಚ್ಚ ಕಡಿಮೆ ಮಾಡಲು 50 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ಕೆಎಂಎಫ್ ಶಾರ್ಟ್ ಲಿಸ್ಟ್ ಮಾಡಿದೆ. ಹೀಗಾಗಿ ಅಸಮಾಧಾನದಿಂದ ಸಿಬ್ಬಂದಿಯೇ ಹೀಗೆ ಮಾಡಿದ್ದಾರೆ ಎಂದು ಕೆಎಂಎಫ್ ನಿರ್ದೇಶಕ ಪ್ರಭುಶಂಕರ ಆರೋಪಿಸಿದ್ದಾರೆ.