ಪಾಟ್ನಾ (ಬಿಹಾರ): ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬ ವಿಪಕ್ಷಗಳ ಆರೋಪ ಸುಳ್ಳಾಗಿದೆ. ಕಾರಣ, ಸರ್ಕಾರದ 25 ಸಚಿವರ ಪೈಕಿ ಒಬ್ಬರು ಮಾತ್ರ ಸೋಲು ಕಂಡು 24 ಮಂತ್ರಿಗಳು ಜಯ ಗಳಿಸಿದ್ದಾರೆ. ಸಂಪುಟದ ಮುಂದಾಳು ಮತ್ತು ಸಿಎಂ ಆಗಿರುವ ನಿತೀಶ್ ಕುಮಾರ್ ಅವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.
ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರು ಕ್ರಮವಾಗಿ ತಾರಾಪುರ ಮತ್ತು ಲಖಿಸರಾಯ್ ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಿಶೇಷವೆಂದರೆ, ಬಿಜೆಪಿಯ ಒಟ್ಟು 15 ಸಚಿವರೂ ಚುನಾವಣೆಯಲ್ಲಿ ಅಮೋಘ ವಿಜಯ ಪಡೆದಿದ್ದಾರೆ.
ಬಿಜೆಪಿಯ ಹಿರಿಯ ನಾಯಕ, ಕೃಷಿ ಸಚಿವ ಪ್ರೇಮ್ ಕುಮಾರ್ ಅವರು ಗಯಾ ಕ್ಷೇತ್ರದಿಂದ ಸತತ ಎಂಟನೇ ಅವಧಿಗೆ ಆಯ್ಕೆಯಾದರು. ಇದು ಅವರದ್ದೇ ಸಚಿವ ಸಂಪುಟ ಸಹೋದ್ಯೋಗಿಯಾದ ಜೆಡಿಯುನ ಬಿಜೇಂದ್ರ ಯಾದವ್ (ಸುಪೌಲ್) ಅವರ ದಾಖಲೆಯನ್ನು ಸರಿಗಟ್ಟಿದರು.
2020ರ ಚುನಾವಣೆಯಲ್ಲಿ ಸಾಹೇಬ್‌ಗಂಜ್‌ನಿಂದ ವಿಕಾಸಶೀಲ ಇನ್ಸಾನ್ ಪಕ್ಷದ ಟಿಕೆಟ್‌ನಲ್ಲಿ ಆಯ್ಕೆಯಾಗಿ ನಂತರ ಬಿಜೆಪಿ ಸೇರಿದ್ದ ಸಚಿವ ರಾಜು ಕುಮಾರ್ ಸಿಂಗ್ ಅವರು ಈ ಬಾರಿ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ.
ಸಂಜಯ್ ಸರೋಗಿ (ದರ್ಭಂಗಾ ಕ್ಷೇತ್ರ) ಮತ್ತು ನಿತಿನ್ ನಬಿನ್ (ಬಂಕಿಪುರ ಕ್ಷೇತ್ರ) ಸತತ ಐದನೇ ಬಾರಿಗೆ ಜನಮನ್ನಣೆ ಪಡೆದರು. ರೇಣು ದೇವಿ (ಬೆಟ್ಟಿಯಾ), ನಿತೀಶ್ ಮಿಶ್ರಾ (ಝಂಝರ್‌ಪುರ), ನೀರಜ್ ಕುಮಾರ್ ಸಿಂಗ್ ಬಬ್ಲು (ಛತ್ತಾಪುರ), ಕೇದಾರ್ ಪ್ರಸಾದ್ ಗುಪ್ತಾ (ಕುರ್ಹಾನಿ), ಜಿಬೇಶ್ ಕುಮಾರ್ (ಜಲೇ), ಕೃಷ್ಣಾನಂದನ್ ಪಾಸ್ವಾನ್ (ಹರ್ಸಿಧಿ), ವಿಜಯ್ ಕುಮಾರ್ ಮಂಡಲ್ ಮತ್ತು ಕೃಷ್ಣ ಕುಮಾರ್ ಮಂಟೂ (ಅಮ್ನೂರ್) ಮತ್ತು ಸುನಿಲ್ ಕುಮಾರ್ (ಬಿಹಾರ ಷರೀಫ್) ಜಯಗಳಿಸಿದ ಇತರ ಬಿಜೆಪಿ ಸಚಿವರು.
ಸಿಎಂ ನಿತೀಶ್ ಆಪ್ತ ಸಚಿವನಿಗೆ ಸೋಲು: 2020 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಸಚಿವ ಸಂಪುಟ ಸೇರಿದ್ದ ಸುಮಿತ್ ಕುಮಾರ್ ಸಿಂಗ್ ಅವರು ಈ ಬಾರಿ ಜೆಡಿಯು ಟಿಕೆಟ್‌ನಲ್ಲಿ ಚಕೈ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದು ಸೋಲು ಕಂಡಿದ್ದಾರೆ. ಅವರು ಆರ್‌ಜೆಡಿ ಅಭ್ಯರ್ಥಿ ಸಾವಿತ್ರಿ ದೇವಿ ಅವರ ವಿರುದ್ಧ 13,000 ಮತಗಳ ಅಂತರದಿಂದ ಪರಾಜಿತರಾಗಿದ್ದಾರೆ.


