ಬೆಂಗಳೂರು: ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಶಾಸಕ ಹೆಚ್. ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ವಿಚಾರಣೆಗೆ ಶನಿವಾರ ವಿಶೇಷ ತನಿಖಾ ತಂಡ (ಎಸ್ಐಟಿ) ತೆರಳಲಿದೆ. ಈ ಸಂಬಂಧ ಮೈಸೂರಿನ ಕೆ. ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಂತ್ರಸ್ತೆ ಅಪಹರಣ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಲಿದೆ. ಪ್ರಕರಣದಲ್ಲಿ ನಿಮ್ಮ ವಿಚಾರಣೆ ಅಗತ್ಯವಿದ್ದು, ಇಂದು (ಜೂನ್ 1) ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗಿನ ಅವಧಿಯಲ್ಲಿ ನೀವು ತಿಳಿಸಿರುವ ವಿಳಾಸಕ್ಕೆ ತನಿಖಾಧಿಕಾರಿಗಳು ಬರುತ್ತಿದ್ದಾರೆ. ಆ ಸಂದರ್ಭದಲ್ಲಿ ತಾವು ಹಾಜರಿರಬೇಕು ಎಂದು ಶುಕ್ರವಾರ 2ನೇ ನೋಟಿಸ್ ಮೂಲಕ ಎಸ್ಐಟಿ ತಿಳಿಸಿತ್ತು. ವಿಚಾರಣೆ ನಡೆಸಲು ಎಸ್ಐಟಿ ತನಿಖಾಧಿಕಾರಿ ಹೇಮಂತ್ ಕುಮಾರ್ ನೇತೃತ್ವದ ತಂಡ ಹಾಸನದ ಹೊಳೆನರಸೀಪುರದಲ್ಲಿರುವ ಭವಾನಿ ಅವರ ಚೆನ್ನಾಂಬಿಕಾ ನಿವಾಸಕ್ಕೆ ತೆರಳಲಿದೆ.
ಮಹಿಳಾ ಸಿಬ್ಬಂದಿಯನ್ನೊಳಗೊಂಡ ಎಸ್ಐಟಿ ತನಿಖಾ ತಂಡ ಹೊಳೆನರಸೀಪುರಕ್ಕೆ ತೆರಳಲಿದ್ದು, ವಿಚಾರಣೆ ನಡೆಸಲಿದೆ. ಈಗಾಗಲೇ ಭವಾನಿ ರೇವಣ್ಣ ಅವರು ತಮ್ಮ ಬಂಧನವಾಗದಂತೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಶುಕ್ರವಾರ ವಜಾಗೊಂಡಿದೆ. ಈ ನಡುವೆ ಭವಾನಿ ರೇವಣ್ಣ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗುತ್ತಿದ್ದು, ಇಂದಿನ ವಿಚಾರಣೆಗೆ ಗೈರಾದರೆ ಯಾವುದೇ ಕ್ಷಣದಲ್ಲಿಯಾದರೂ ಬಂಧಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಬೆನ್ನಲ್ಲೇ ಭವಾನಿ ರೇವಣ್ಣಗೆ ಬಂಧನ ಭೀತಿ ಎದುರಾಗಿದೆ.