ಬೆಂಗಳೂರು, ಆಗಸ್ಟ್ 8: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅವರ ಕುಟುಂಬದ ರಕ್ಷಣೆಗೆ ಅವರು (ದೇವೇಗೌಡರು) ಹೋಗಲೇ ಬೇಕಲ್ಲವಾ? ಅಷ್ಟೇ ಅಲ್ಲದೆ, ನಮ್ಮ ವಿರುದ್ಧ ಪಟ್ಟಿ ಕೊಡುವುದಕ್ಕೆ ಹೋಗಿರಬಹುದು ಎಂದರು.
ನನ್ನನ್ನು ಹಾಗೂ ಸಿಎಂ ಸಿದ್ದರಾಮಯ್ಯರನ್ನು ಒಳಗೆ ಹಾಕಬೇಕೆಂದು ಏನೋ ಮಾಡುತ್ತಿದ್ದಾರೆ. ನಾನು ಇದಕ್ಕೆ ರೆಡಿ ಇದ್ದೇನೆ ಎಂದ ಡಿಕೆ ಶಿವಕುಮಾರ್, ಬಿಜೆಪಿ ಭ್ರಷ್ಟಾಚಾರದ ದಾಖಲೆಗಳನ್ನ ಬಿಡುಗಡೆ ಮಾಡುತ್ತೇವೆ. ದಾಖಲೆ ಬಿಡುಗಡೆಗೆ ದಿನ, ಘಳಿಗೆ ಕೂಡಿ ಬರಲಿ. ಅಕ್ರಮ ಬಗ್ಗೆ ಚರ್ಚೆ ಮಾಡಲು ಬಿಜೆಪಿಯವರು ರೆಡಿಯಾಗಿಲ್ಲ ಎಂದರು.
ಅವರ (ಕುಮಾರಸ್ವಾಮಿ) ಸಹೋದರನಿಗೆ ಆಸ್ತಿ ಹೇಗೆ ಬಂತು ಎಂದು ಹೇಳಿದ್ದೇನೆ. ಅದನ್ನು ಬಿಚ್ಚಿಡಬೇಕಲ್ಲವಾ? ನಾನು ದಲಿತರಿಗೆ ಅನ್ಯಾಯ ಮಾಡಿ ಆಸ್ತಿ ಮಾಡಿದೆ ಎಂದು ಆರೋಪ ಮಾಡುತ್ತಾರೆ. ಆ ಬಗ್ಗೆ ದಾಖಲೆಗಳನ್ನು ಪ್ರದರ್ಶಿಸಲಿ. ಬ್ಲಾಕ್ ಅಂಡ್ ವೈಟ್ ಟೀವಿ ಮಾಡಿಕೊಂಡಿದ್ದೆನಂತೆ. ಅದನ್ನು ಅಲ್ಲಿ ಬಂದು ವಿಚಾರಿಸಲಿ? ನಾವೆಲ್ಲಾ ಹುರುಳಿ, ಕಡಲೇಕಾಯಿ, ರಾಗಿಯನ್ನೇ ತಿಂದವರು. ಅದನ್ನು ಬೆಳೆದುಕೊಂಡು ಬಂದಿದ್ದೇವೆ. ಈಗಲೂ ಬೆಳೆಯುತ್ತಿದ್ದೇವೆ. ನಮ್ಮ ಆಸ್ತಿ ಎಷ್ಟಿದೆ ಅನ್ನೋದನ್ನ ಬಂದು ಕೇಳಲಿ ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದರು.
ಸಿಎಂ, ಡಿಸಿಎಂರನ್ನು ಚಕ್ರವ್ಯೂಹದಲ್ಲಿ ಸಿಲುಕಿಸುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೋಡಿ ಪಾ, ಅದೇನೋ ಹೇಳ್ತಾರಲ್ಲ. ದಿನಾ ಸಯೋರಿಗೆ ಅಳುವವರು ಯಾರು ಅಂತ. ಅದೇ ರೀತಿ, ಇವರದೆಲ್ಲಾ ಗೋಳು ಇದ್ದಿದ್ದೇ. ಇವರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಂದಕ್ಕೂ ಹೋರಾಟ ಮಾಡುತ್ತೇವೆ ಎಂದರು.